ಎಂ.ಕೆ. ಹುಬ್ಬಳ್ಳಿ, : ಪಟ್ಟಣದಲ್ಲಿ ಸರ್ಕಾರಿ ಖುಲ್ಲಾ ಜಾಗದ ಕೊರತೆಯಿಂದ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ನೂತನ ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯಿತಿಗೆ ಹಲವು ವರ್ಷಗಳಿಂದ ಸುಸಜ್ಜಿತ ಆಡಳಿತ ಕಟ್ಟಡದ ಅಗತ್ಯವಿದ್ದು, ಇದೀಗ ಪೌರಾಡಳಿತ ಇಲಾಖೆಯಿಂದ ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಪಟ್ಟಣ ಬೆಳೆಯುತ್ತಿದ್ದಂತೆ ಆಡಳಿತ ವ್ಯವಸ್ಥೆಯೂ ಆಧುನಿಕವಾಗಬೇಕಿದ್ದು, ಅದಕ್ಕೆ ತಕ್ಕ ಮೂಲಸೌಕರ್ಯಗಳನ್ನು ಕಲ್ಪಿಸುವುದು ಅಗತ್ಯ ಎಂದು ಹೇಳಿದರು.
ಪಟ್ಟಣದಲ್ಲಿ ಹಲವು ರಸ್ತೆಗಳ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳು ಬಾಕಿಯಿವೆ. ಪಟ್ಟಣ ಪಂಚಾಯಿತಿ ಸದಸ್ಯರು ಸಮನ್ವಯದಿಂದ ಕಾರ್ಯನಿರ್ವಹಿಸಿ ಈ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಉತ್ತಮ ರಸ್ತೆ ಮತ್ತು ಚರಂಡಿ ವ್ಯವಸ್ಥೆಯಿಂದ ಸ್ವಚ್ಛತೆ ಕಾಪಾಡಲು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪಟ್ಟಣದ ಸ್ವಚ್ಛತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಶೀಘ್ರದಲ್ಲೇ ನದಿಮೂಲದಿಂದ 24×7 ಶುದ್ಧ ಕುಡಿಯುವ ನೀರಿನ ಯೋಜನೆ ಮನೆಮನೆಗೂ ತಲುಪಲಿದೆ ಎಂದು ಹೇಳಿದರು.
ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಸುತ್ತ ಅರಣ್ಯ ಇಲಾಖೆಯಿಂದ ಟ್ರೀ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಮಕ್ಕಳಿಗೆ ಆಟದ ಮೈದಾನ ಹಾಗೂ ಹಿರಿಯರಿಗೆ ವಾಯುವಿಹಾರಕ್ಕೆ ಅನುಕೂಲವಾಗಲಿದೆ ಎಂದರು.
ಸರ್ಕಾರಿ ಜಾಗದ ಕೊರತೆಯಿಂದ ಹಲವು ಅಭಿವೃದ್ಧಿ ಯೋಜನೆಗಳು ವಾಪಸ್ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಪಟ್ಟಣದಲ್ಲಿ ಕನಿಷ್ಠ ಎರಡು ಎಕರೆ ಸರ್ಕಾರಿ ಜಾಗವನ್ನು ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಡಬೇಕು. ಒಮ್ಮೆ ಸರ್ಕಾರದ ಯೋಜನೆಗಳು ಹಿಂದಿರುಗಿದರೆ ಅವುಗಳನ್ನು ಮರುಪಡೆಯುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ಮೂರು ವರ್ಷಗಳಲ್ಲಿ ಪಟ್ಟಣಕ್ಕೆ ಸುಮಾರು ₹30 ರಿಂದ ₹35 ಕೋಟಿ ಅನುದಾನ ತರಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ಪಟ್ಟಣ ಪಂಚಾಯಿತಿಗಳ ಅಭಿವೃದ್ಧಿಗೆ ₹7.30 ಕೋಟಿ ಮೀಸಲಿಡಲಾಗಿದೆ. ಎಂ.ಕೆ. ಹುಬ್ಬಳ್ಳಿ ಪಟ್ಟಣಕ್ಕೆ ₹4.25 ಕೋಟಿ ಹಾಗೂ ಕಿತ್ತೂರು ಪಟ್ಟಣಕ್ಕೆ ₹3.25 ಕೋಟಿ ಅನುದಾನ ನೀಡಲಾಗಿದೆ. ಈ ಕಾಮಗಾರಿಗಳಿಗೂ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೂ ಆದ್ಯತೆ ನೀಡಲಾಗಿದೆ. ಪಟ್ಟಣದಲ್ಲಿ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಈಗ ಆರಂಭವಾಗಿರುವ ಪಟ್ಟಣ ಪಂಚಾಯಿತಿ ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಯಾವುದೇ ರೀತಿಯ ಕಳಪೆ ಕಾಮಗಾರಿಗೆ ಅವಕಾಶ ನೀಡದೆ ಸದಸ್ಯರು ಹಾಗೂ ಸಾರ್ವಜನಿಕರು ನಿಗಾ ವಹಿಸಿ ಸಹಕರಿಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಕರೆ ನೀಡಿದರು.
ಸಭೆ ಉದ್ದೇಶಿಸಿ ಚಿನ್ನಪ್ಪ ಮುತ್ನಾಳ,ಎನ್.ಸಿ. ಗಣಾಚಾರಿ, ಹಾಗೂ ದೊಡ್ಡಪ್ಪ ಗಣಾಚಾರಿ ಮಾತನಾಡಿದರು.
ಈ ವೇಳೆ ಪಟ್ಟಣದ ನಾಗರಿಕರಾದ ಫಕೀರಪ್ಪ ಸಕ್ರಣ್ಣವರ, ಶಂಕರ ಕಿಲ್ಲೆದಾರ, ಶ್ರೀಶೈಲ್ ತಿಗಡಿ, ಅದೃಶ್ಯಾನಂದ ಗದ್ದಿಹಳ್ಳಿಶೆಟ್ಟಿ, ರುದ್ರಪ್ಪ ಕೊಡ್ಲಿ,ಶಿವಣಪ್ಪ ವಾಲಿ, ಪಪಂ ಅಧ್ಯಕ್ಷ ಸುರೇಶ ಮುತ್ನಾಳ, ಉಪಾಧ್ಯಕ್ಷ ಲಕ್ಷ್ಮಿ ನಾಗನೂರು, ಸದಸ್ಯರಾದ ದೇಮಪ್ಪ ಬಸರಗಿ, ಗದಿಗೆವ್ವ ಜಂಗಳಿ, ದೊಡ್ಡಪ್ಪ ಗಣಾಚಾರಿ, ಪ್ರಕಾಶ ಗಿರಿಜಿಮನಿ, ಮಂಜುನಾಥ ಕಡಕೋಳ, ಸಾವಿತ್ರಿ ಹೊನ್ನಣ್ಣವರ, ಪ್ರಕಾಶ ಕೊಡ್ಲಿ, ಸುಶೀಲಾ ಗಣಾಚಾರಿ, ಸುಭಾನಿ ಅಗಸಿಬಾಗಿಲ , ಪರವಿನ ನಬುವಾಲೆ, ಸಮೀರ ಪಟೇಲ್ , ಮಂಗಳಾ ದೇವಟ್ಟಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ ಉಪಸ್ಥಿತರಿದರು.
