ವಿಜಯಪುರ,ಜು.೦೨: ೧೨ನೇ ಶತಮಾನದ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಮನುಕುಲಕ್ಕೆ ತಲುಪಿಸಿದ ಮಹಾನ್ ದಾರ್ಶನಿಕ ಡಾ. ಫ.ಗು. ಹಳಕಟ್ಟಿ ಅವರ ಸೇವೆ ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಚನಗಳು ಕೇವಲ ಸಾಹಿತ್ಯವಲ್ಲ, ಬದುಕಿನ ಮೌಲ್ಯಗಳನ್ನು ಬೋಧಿಸುವ ಅಮೂಲ್ಯ ಸಂದೇಶಗಳಾಗಿವೆ. ಅವು ವಿವಿಧ ಭಾಷೆಗಳಿಗೆ ಭಾಷಾಂತರಗೊಂಡು ಜಗತ್ತಿನಾದ್ಯಂತ ಪಸರಿಸಬೇಕು. ವಚನ ಸಾಹಿತ್ಯವನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಟ್ಟ ಡಾ. ಫ.ಗು. ಹಳಕಟ್ಟಿ ಅವರ ಸಾಧನೆ ಯುವಜನರಿಗೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಇಂತಹ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸ ನೀಡಿದ: ಡಾ. ವಿ.ಡಿ.ಐಹೊಳ್ಳಿ ಅವರು ಡಾ. ಫ.ಗು. ಹಳಕಟ್ಟಿ ಅವರ ಜೀವನ, ಸಾಹಿತ್ಯ ಸೇವೆ ಹಾಗೂ ವಚನ ಸಾಹಿತ್ಯ ಸಂರಕ್ಷಣೆಗೆ ಅವರು ನೀಡಿದ ಅಮೂಲ್ಯ ಕೊಡುಗೆ ಹಾಗೂ ಶರಣರ ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸಿದ ಡಾ. ಫ.ಗು. ಹಳಕಟ್ಟಿ ಅವರ ಸೇವೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಅಜರಾಮರವಾಗಿದೆ ಎಂದು ಅವರು ಹೇಳಿದರು.
ವಚನ ಸಾಹಿತ್ಯದಲ್ಲಿರುವ ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳನ್ನು ಯುವಜನತೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ಡಾ. ಫ.ಗು. ಹಳಕಟ್ಟಿ ಅವರ ಜೀವನ, ಸಾಧನೆ ಕುರತು ಸಹ ವಿಸ್ತಾರವಾಗಿ ಆರ್ಥಿಕ ಸಂಕಷ್ಟಗಳ ನಡುವೆಯೂ ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಶರಣರ ವಚನಗಳನ್ನು ಸಂಗ್ರಹಿಸುವುದು, ಮುದ್ರಿಸುವುದು ಹಾಗೂ ಪ್ರಸಾರಗೊಳಿಸುವ ಕಾರ್ಯಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದ ಡಾ. ಫ.ಗು. ಹಳಕಟ್ಟಿ ಅವರು ನಿಸ್ವಾರ್ಥ ಸೇವೆಯ ಪ್ರತೀಕವಾಗಿದ್ದರು. ಸಂಶೋಧಕ, ಸಮಾಜಸೇವಕ ಹಾಗೂ ಕನ್ನಡದ ಅಭಿಮಾನಿಯಾಗಿದ್ದ ಅವರು ವಿಜಯಪುರ ನಗರದ ಅಭಿವೃದ್ಧಿ ಮತ್ತು ಕನ್ನಡ ಭಾಷೆಯ ಬೆಳವಣಿಗೆಗೂ ಮಹತ್ವದ ಕೊಡುಗೆ ನೀಡಿದರು ಎಂದು ಹೇಳಿದರು.
ವಿಜಯಪುರ ನಗರಸಭೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ ಅವರು, ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಭೂತನಾಳ ಕೆರೆ ನಿರ್ಮಾಣಕ್ಕೆ ಶ್ರಮಿಸಿದರು. ಎಂದು ತಿಳಿಸಿದರು.
ಡಾ. ಫ.ಗು. ಹಳಕಟ್ಟಿ ಅವರು ಸಂರಕ್ಷಿಸಿದ ವಚನ ಸಾಹಿತ್ಯದ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.
ಸಮಾಜ ಮುಖಂಡ ಬಿ.ಎನ್. ನೂಲವಿ ಅವರು ಮಾತನಾಡಿದರು. ಡಾ. ಫ.ಗು. ಹಳಕಟ್ಟಿ ಅವರ ಜೀವನ ಚರಿತ್ರೆ ಹಾಗೂ ವಚನ ಸಂರಕ್ಷಣೆ ಕುರಿತು ಶಾಲಾ-ಕಾಲೇಜಗಳ ಪಠ್ಯ ಪುಸ್ತಕದಲ್ಲಿ ಸೇರಿಸಲು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ ಇಲಾಖೆ ಅಧಿಕಾರಿ ವಿದ್ಯಾವತಿ ಅಥಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರು, ವಿದ್ಯಾವತಿ ಅಂಕಲಗಿ, ಡಾ. ಎಮ್.ಆರ್.ಗುರಿಕರ, ಅಶೋಕ ಅಂಕದ, ಸಂಗಮೇಶ ಮೇತ್ರಿ ಹಾಗೂ ಕೆ.ಎಮ್.ಅಂಕಲಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
