ಕೋಟಾ:
ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ತಿರುವನಂತಪುರಂ - ದೆಹಲಿಯ ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಂದು ನಸುಕಿನ ಜಾವ 5 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದೆ.
ಭಾನುವಾರ ಬೆಳಗ್ಗೆ ರಾಜಸ್ಥಾನದ ಕೋಟಾದ ವಿಕ್ರಮ್‌ಗಢ ಅಲೋಟ್ ರೈಲು ನಿಲ್ದಾಣದ ಬಳಿ ರೈಲಿನ ಎಸಿ ಬೋಗಿಯಲ್ಲಿ ಬೆಂಕಿ ಕಂಡುಬಂದಿದೆ. ಬೆಂಕಿ ಕಾಣಿಸಿಕೊಂಡ ಬಿ1 ಎಸಿ ಬೋಗಿಯಲ್ಲಿ 68 ಜನ ಪ್ರಯಾಣಿಕರಿದ್ದರು. ತಕ್ಷಣವೇ ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡ ಬಗ್ಗೆ ಮೊದಲು ಗಾರ್ಡ್ ಗಮನಿಸಿ ತಕ್ಷಣವೇ ಎಚ್ಚರಿಸಿದ್ದ. ಬಳಿಕ ತುರ್ತು ಬ್ರೇಕ್ಗಳನ್ನು ಬಳಸಿ ರೈಲನ್ನು ನಿಲ್ಲಿಸಲಾಯಿತು. ತಕ್ಷಣವೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ರೈಲಿನಲ್ಲಿರುವ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಿದರು. ಸುಮಾರು 15 ನಿಮಿಷಗಳಲ್ಲಿ ಬೋಗಿಯನ್ನ ತೆರವುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ. ಅದೃಷ್ಟವಶಾತ್, ಯಾವುದೇ ರೀತಿಯ ಸಾವುನೋವುಗಳು ಸಂಭವಿಸಿಲ್ಲ ಎಂದು ಕೋಟಾ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೌರಭ್ ಜೈನ್ ಮಾಹಿತಿ ನೀಡಿದ್ದಾರೆ.
ಘಟನೆ ವರದಿಯಾದ ಬೆನ್ನಲ್ಲೇ ಕೋಟಾ ರೈಲ್ವೆ ವಿಭಾಗದ ಪರಿಹಾರ ಮತ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಿದ್ದೆವು. ಹಾನಿಗೊಳಗಾದ ಬೋಗಿಯನ್ನು ತಕ್ಷಣವೇ ರೇಕ್‌ನಿಂದ ಬೇರ್ಪಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಕಿ ಕಾಣಿಸಿಕೊಂಡ ಹತ್ತಿರದ ಬೋಗಿಗಳನ್ನು ಸಹ ತೆರವು ಮಾಡಿದ್ದೇವೆ. ಹೆಚ್ಚುವರಿ ಸುರಕ್ಷತೆ ಹಿನ್ನೆಲೆ ಓವರ್ಹೆಡ್ ವಿದ್ಯುತ್ ಸರಬರಾಜು (OHE) ಅನ್ನು ಕೂಡ ಆಫ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಬಿ1 ಬೋಗಿಯಲ್ಲಿನ ಪ್ರಯಾಣಿಕರಿಗೆ ಕೋಟಾವರೆಗೆ ಇತರ ಬೋಗಿಗಳಲ್ಲಿ ಸ್ಥಳಾವಕಾಶ ಮಾಡಿ ಕೊಡಲಾಗಿಯಿತು. ಬಳಿಕ ಕೋಟಾದಿಂದ ಹೆಚ್ಚುವರಿ ಬೋಗಿಯನ್ನು ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಎಕ್ಸ್‌ಪ್ರೆಸ್ ರೈಲು ದೆಹಲಿಯತ್ತ ಪ್ರಯಾಣ ಮುಂದುವರಿಸಿದೆ. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ರಾಜಧಾನಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12431) ಶುಕ್ರವಾರ ಕೇರಳದ ತಿರುವನಂತಪುರದಿಂದ ಹೊರಟು ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ ಇಂದು ಮಧ್ಯಾಹ್ನ ತಲುಪಲಿದೆ. ಮಾರ್ಗ ಮಧ್ಯೆ ಅಗ್ನಿ ಅವಘಡ ಸಂಭವಿಸಿದೆ.
ಇನ್ನು ಎರಡು ದಿನಗಳ ಹಿಂದೆಯಷ್ಟೇ ಮೇ 15 ರಂದು ನಾಂಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಹೈದರಾಬಾದ್-ಜೈಪುರ ವಿಶೇಷ ಎಕ್ಸ್‌ಪ್ರೆಸ್‌ನ ಎರಡು ಎಸಿ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿತ್ತು.
