ತಾಳಿಕೋಟೆ: ನವರಾತ್ರಿ ಉತ್ಸವ ಹಾಗೂ ಬನ್ನಿ ವಿನಿಮಯ ಕಾರ್ಯಕ್ರಮವು ಪರಸ್ಪರ ಸೌಹಾರ್ದತೆ, ಪ್ರೀತಿ-ವಿಶ್ವಾಸ ಮತ್ತು ಸಂಬಂಧಗಳನ್ನು ಬೆಸೆಯುವ ಸಂಪ್ರದಾಯಬದ್ಧ ಹಬ್ಬವಾಗಿದೆ ಎಂದು ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಗುರುವಾರರಂದು ಮತಕ್ಷೇತ್ರದ ಕುದರಿ ಸಾಲವಾಡಗಿ ಗ್ರಾಮದ ತಮ್ಮ ಶಾಸಕರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಇಲಾಖಾ ಅಧಿಕಾರಿ ವರ್ಗದವರು ಮತ್ತು ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಅವರು ಮಾತನಾಡಿದರು.
ನವರಾತ್ರಿ ಉತ್ಸವವು ಶಕ್ತಿ ಆರಾಧನೆಯ ಮಹತ್ವದ ಹಬ್ಬವಾಗಿದ್ದು, ಬನ್ನಿ ವಿನಿಮಯದ ಮೂಲಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯನ್ನು ಗಟ್ಟಿಗೊಳಿಸುವ ಸಂಪ್ರದಾಯವನ್ನು ಹೊಂದಿದೆ. ಇಂತಹ ಹಬ್ಬಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಸಹೋದರತ್ವದ ಭಾವನೆಯನ್ನು ಬೆಳೆಸುತ್ತವೆ ಎಂದು ತಿಳಿಸಿದರು. ಶ್ರೀ ದೇವಿಯು ಎಲ್ಲರಿಗೂ ಸುಖ, ಶಾಂತಿ, ಸಕಲ ಆಯುರ ಆರೋಗ್ಯ ಹಾಗೂ ಸಂಪತ್ತು ಕರುಣಿಸಲಿ. ಉತ್ತಮ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ರೈತರು ಎದುರಿಸುತ್ತಿರುವ ಸಂಕಷ್ಟಗಳು ದೂರವಾಗಲಿ. ನಾಡಿನ ಜನತೆ ನೆಮ್ಮದಿ ಹಾಗೂ ಸಂತೋಷದಿಂದ ಬದುಕುವಂತಾಗಲಿ ಎಂದು ಶ್ರೀ ದೇವಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಶಾಸಕರ ಸಹೋದರ ಸಚೀನಗೌಡ ಪಾಟೀಲ, ಜೆಡಿಎಸ್ ತಾಲೂಕು ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು, ಶಾಸಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.