ಧಾರವಾಡ ,22 ನಾಡಹಬ್ಬ ನವರಾತ್ರಿ ಉತ್ಸವದ ಅಂಗವಾಗಿ ಧಾರವಾಡದಲ್ಲಿ 22ನೇ ವರ್ಷದ ಅದ್ದೂರಿ ದಸರಾ ಜಂಬೂ ಸವಾರಿ ಚಾಲನೆ ನಡೆಯಿತು.
ಮಧ್ಯಾಹ್ನ 1:15ಕ್ಕೆ ಬಂಡೆಮ್ಮ ದೇವಸ್ಥಾನದಲ್ಲಿ ಬಂಡೆಮ್ಮ ದೇವಿಯ ಹಾಗೂ ಅಂಬಾರಿ ಪೂಜೆಯನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ನಾಡಿನ ಹಿರಿಯ ಖ್ಯಾತ ಸ್ವಾಮಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಎಂ. ನಿ. ಪ್ರ. ಶಿವಾನಂದ ಶಿವಯೋಗಿ ರಾಜಯೋಗೇಂದ್ರ ಮಹಾಸ್ವಾಮಿಗಳು, ಕೊಡಿಮಠ ಇವರು ಅಂಬಾರಿ ಪೂಜೆಯನ್ನು ಮಹಿಳೆಯರು, ಮಕ್ಕಳು ಹಾಗೂ ಭಕ್ತಾದಿಗಳ ಮಧ್ಯೆ ನೆರವೇರಿಸಿದರು.
ಬಂಡೆಮ್ಮ ದೇವಸ್ಥಾನದಿಂದ ಅಂಬಾರಿಯನ್ನು ಹೊತ್ತ ರೂಪಾವತಿ ಎಂಬ ಆನೆಯು ಈಶ್ವರ ದೇವಸ್ಥಾನದ ವೇದಿಕೆಯ ಕಡೆಗೆ ಅತ್ಯಂತ ಗಾಂಭೀರ್ಯದಿಂದ ಸಾಗಿತು.
ಮಧ್ಯಾಹ್ನ 3 ಗಂಟೆಗೆ ಜಂಬೂ ಸವಾರಿ ಚಾಲನೆಯ ವೇದಿಕೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಖ್ಯಾತ ಸಂಗೀತಗಾರರು ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಡಾ. ಎಂ. ವೆಂಕಟೇಶ್ ಕುಮಾರ್ ಅವರು ಸಮಾರಂಭವನ್ನು ಉದ್ಘಾಟಿಸಿದರು.
ಈ ನಾಡಿನ ಪ್ರಸಿದ್ಧ ಹಬ್ಬವಾದ ನಾಡಹಬ್ಬ ದಸರಾ ಹಾಗೂ ಇಷ್ಟವಾದ ಜಂಬೂ ಸವಾರಿ ಸಮಾರಂಭವನ್ನು ಉದ್ಘಾಟಿಸುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, “ನಾನು ಒಬ್ಬ ಸಾಮಾನ್ಯ ವ್ಯಕ್ತಿ. ನನ್ನನ್ನು ಈ ಸಮಾರಂಭದ ಉದ್ಘಾಟನೆಗೆ ಆಹ್ವಾನಿಸಿ ದೊಡ್ಡವನನ್ನಾಗಿ ಮಾಡಿದ್ದೀರಿ. ಇದನ್ನು ನಾನು ಎಂದಿಗೂ ಮರೆಯಲಾರೆ. ನಾನು ಒಬ್ಬ ಸಂಗೀತಗಾರ, ದೇವಿಯ ಭಕ್ತ. ನನಗೆ ಮಾತನಾಡಲು ಬರುವುದಿಲ್ಲ, ಹಾಡಲು ಬರುತ್ತದೆ” ಎಂದು ಹೇಳಿ, ಹಾಡಿನ ಸೇವೆಯ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು, ಮೂರುಸಾವಿರ ಮಠ, ಇವರು ಮಾತನಾಡುತ್ತಾ, “ಈ ದಸರಾ ಜಂಬೂ ಸವಾರಿ ಉತ್ಸವವನ್ನು ಆಯೋಜಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಿಂದೆ ಮೈಸೂರಿನಲ್ಲಿ ಮಹಾರಾಜರು ದಸರಾ ಉತ್ಸವವನ್ನು ಆಚರಿಸುತ್ತಿದ್ದರು. ಇಂದು ಮೈಸೂರು ದಸರಾ ಹಬ್ಬವನ್ನು ಸರ್ಕಾರವೇ ಆಯೋಜಿಸುತ್ತದೆ. ಆದರೆ, ಉತ್ತರ ಕರ್ನಾಟಕದ ಧಾರವಾಡದಲ್ಲಿ ಕಳೆದ 22 ವರ್ಷಗಳಿಂದ ಈ ಉತ್ಸವದ ಅಧ್ಯಕ್ಷರಾದ ಗುರುರಾಜ ಹುಣಸಿಮರದ ಹಾಗೂ ಅವರ ಗೆಳೆಯರು ಸೇರಿಕೊಂಡು ಇಂತಹ ನಾಡಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನೀಯವಾದದ್ದು.
ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಹಾಗೂ ದುಷ್ಟಶಕ್ತಿಗಳನ್ನು ಸಂಹರಿಸುವ ವಿಜಯದಶಮಿ ಉತ್ಸವ ಯಶಸ್ವಿಯಾಗಲಿ. ಮುಂದಿನ ಎರಡು ವರ್ಷಗಳಲ್ಲಿ ಈ ಉತ್ಸವದ ಬೆಳ್ಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವಂತಾಗಲಿ. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರವೂ ಕೈಜೋಡಿಸುವಂತಾಗಲಿ” ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಜಗದ್ಗುರು ಶ್ರೀ ಫಕೀರ ಡಿಂಗಾಳೇಶ್ವರ ಮಹಾಸ್ವಾಮಿಗಳು, ಭಾವೈಕ್ಯ ಮಹಾಸಂಸ್ಥಾನ ಮಠ, ಶಿರಹಟ್ಟಿ ಇವರು ಮಾತನಾಡಿ, ಇಂದು ಈ ಸಮಾರಂಭವನ್ನು ಖ್ಯಾತ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಡಾ. ಎಂ. ವೆಂಕಟೇಶ್ ಕುಮಾರ್ ಅವರು ಉದ್ಘಾಟಿಸಿರುವುದು ಸಂತಸದ ವಿಷಯ. ಇಂತಹ ಒಳ್ಳೆಯ ಸಂಪ್ರದಾಯವನ್ನು ಒಳ್ಳೆಯ ಹಸ್ತದಿಂದ ಉದ್ಘಾಟಿಸಿರುವುದು ಶ್ಲಾಘನೀಯ ಎಂದು ಸಂಘಟಕರನ್ನು ಅಭಿನಂದಿಸಿದರು. ಈ ಉತ್ಸವಕ್ಕೆ ಸರ್ಕಾರವು ಕೇವಲ ಮೈಸೂರು ಮತ್ತು ಮೈಸೂರಿನ ಸುತ್ತಮುತ್ತಲಿನ ಭಾಗಗಳಿಗೆ ಮಾತ್ರ ಸಹಾಯ ಮಾಡುವ ಬದಲು, ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿಯೂ ಇಂತಹ ಉತ್ಸವಗಳಿಗೆ ಸಹಾಯ ಮಾಡುವಂತಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಎಂ. ನಿ. ಪ್ರ. ಶಿವಾನಂದ ರಾಜಯೋಗೇಂದ್ರ ಮಹಾಸ್ವಾಮಿಗಳು, ಕೊಡಿಮಠ ಮಹಾಸಂಸ್ಥಾನ, ಹರನಹಳ್ಳಿ ಇವರು ಜಂಬೂ ಸವಾರಿಗೆ ಚಾಲನೆ ನೀಡಿ, ನಾಡಿನ ಜನರಿಗೆ ಒಳ್ಳೆಯ ಮಳೆ ಹಾಗೂ ಬೆಳೆ ಸಮೃದ್ಧಿಯಾಗಲಿ ಎಂದು ಹರಸಿದರು.
ದೇವಿಯ ಅಂಬಾರಿಯನ್ನು ಹೊತ್ತ ರೂಪಾವತಿ ಆನೆಯು ರಾಜಗಾಂಭೀರ್ಯದಿಂದ ಗಾಂಧಿನಗರದ ಈಶ್ವರ ದೇವಸ್ಥಾನದ ಮೂಲಕ ಸಾಗಿತು. ಸುಮಾರು 22ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಕರಡಿಮಜಲು, ಡೊಳ್ಳು, ಜಾಂಜ್, ಜಗ್ಗಲಿಗೆ ಹಾಗೂ 500ಕ್ಕೂ ಹೆಚ್ಚು ಜನರ ಭಜನಾ ತಂಡಗಳು ಮತ್ತು 108 ಜನ ಮಹಿಳೆಯರ ಕುಂಭ ಮೆರವಣಿಗೆಯೊಂದಿಗೆ ತೋಳನಕಾ, ಹೊಸಯಲ್ಲಾಪುರ, ಸುಭಾಷ್ ರಸ್ತೆಯ ಮೂಲಕ ಕಡಪಾ ಮೈದಾನವನ್ನು ತಲುಪಬೇಕಿತ್ತು.
ಆದರೆ, ಕಡಪಾ ಮೈದಾನಕ್ಕೆ ಕೀಲಿ ಹಾಕಿ ಸಾರ್ವಜನಿಕರ ಉಪಯೋಗಕ್ಕೆ ಬಾರದಂತೆ ಮಾಡಿರುವುದನ್ನು ಕಂಡು ಕಲಾವಿದರು ಹಾಗೂ ಆಗಮಿಸಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಲಾಮೇಳವು ಮಹಾನಗರ ಪಾಲಿಕೆಯ ಆವರಣದೊಳಗೆ ಸಾಗಿಹೋಗಿ ಮುಕ್ತಾಯಗೊಂಡಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ದಸರಾ ಜಂಬೂ ಸವಾರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಗುರುರಾಜ ಹುಣಸಿಮರದ ಅವರು ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕರಾದ ಶ್ರೀಧರ ನಾಡಿಗೇರ ಅವರು ಮಾತನಾಡಿದರು.
ವೇದಿಕೆಯ ಮೇಲೆ ಪೂಜ್ಯ ಶಿವಯೋಗಿ ಸ್ವಾಮಿಗಳು, ಬಮ್ಮನಹಳ್ಳಿ ಮಠದ ಹಾಂಗಲ್, ವೀರೇಶ್ವರ ಶಿವಾಚಾರ್ಯರು, ಹುನುಗುಂದ ಮಠ, ಧಾರವಾಡ, ಖ್ಯಾತ ಮಕ್ಕಳ ವೈದ್ಯರಾದ ಡಾ. ರಾಜನ್ ದೇಶಪಾಂಡೆ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ್, ಖ್ಯಾತ ವೈದ್ಯರಾದ ಡಾ. ಎಸ್. ಆರ್. ರಮಾನಗೌಡರ್, ಸಮಾಜಸೇವಕರಾದ ಮಹೇಂದ್ರ ಸಿಂಗಿ, ಹುಬ್ಬಳ್ಳಿ ಹಾಗೂ ದಸರಾ ಸಮಿತಿಯ ಕಾರ್ಯದರ್ಶಿಗಳಾದ ನಾರಾಯಣ ಕೊಪರ್ಡೆ ಅವರು ಉಪಸ್ಥಿತರಿದ್ದರು.
ಆರಂಭದಲ್ಲಿ ದಸರಾ ಉತ್ಸವ ಸಮಿತಿಯ ಮನೋಜ್ ಸಂಗೊಳ್ಳಿ ಅವರು ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಪಾಂಡುರಂಗ ಕಿರೇಸೂರ, ಯಶವಂತರಾವ್ ಕದಂ, ಹನಮೇಶ ಶರಾಫ್, ವಿಲಾಸ್ ಟಿಬೇಲಿ ಹಾಗೂ ಸುಭಾಷ್ ಮೂರೆ ಅವರು ಸ್ವಾಮೀಜಿಗಳಿಗೆ ಮಾಲಾರ್ಪಣೆ ಮಾಡಿದರು. ಶ್ರೀಮತಿ ಮಂಜುಳಾ ಮುಂಜಿ ಅವರು ವಂದಿಸಿದರು. ಮಂಜುನಾಥ ಚಿಕ್ಕಣ್ಣವರ ಅವರು ಉಪಸ್ಥಿತರಿದ್ದರು.