ಪೂರ್ವಸಿದ್ದತಾ ಸಭೆ | ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರ ವ್ಯವಸ್ಥೆ ೨೩ & ೨೪ ರಂದು ಸಾಮಾನ್ಯ ಪ್ರವೇಶ ಪರೀಕ್ಷೆ : ಎಡಿಸಿ

MK HasiruKranti
ಪೂರ್ವಸಿದ್ದತಾ ಸಭೆ | ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರ ವ್ಯವಸ್ಥೆ ೨೩ & ೨೪ ರಂದು ಸಾಮಾನ್ಯ ಪ್ರವೇಶ ಪರೀಕ್ಷೆ : ಎಡಿಸಿ
WhatsApp Group Join Now
Telegram Group Join Now
ಬಾಗಲಕೋಟೆ : ಎಪ್ರೀಲ್ ೧೮ : ಜಿಲ್ಲೆಯ ಬಾಗಲಕೋಟೆ ಮತ್ತು ಜಮಖಂಡಿ ನಗರದಲ್ಲಿ ಎಪ್ರೀಲ್ ೨೩ ಮತ್ತು ೨೪ ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಗಳು ನಡೆಯಲಿದ್ದು, ಪರೀಕ್ಷೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಸಿಇಟಿ-೨೦೨೬ ಪರೀಕ್ಷೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಗಲಕೋಟೆ ನಗರದಲ್ಲಿ ೧೩ ಹಾಗೂ ಜಮಖಂಡಿ ನಗರದಲ್ಲಿ ೮ ಸೇರಿ ಒಟ್ಟು ೨೧ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು ೯೮೦೦ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯನ್ನು ಬರೆಯಲಿದ್ದು, ಇದರಲ್ಲಿ ಬಾಗಲಕೋಟೆ ನಗರದಲ್ಲಿ ೫೫೫೩ ವಿದ್ಯಾರ್ಥಿಗಳು ಹಾಗೂ ಜಮಖಂಡಿ ನಗರದಲ್ಲಿ ೪೨೪೭ ವಿದ್ಯಾರ್ಥಿಗಳು ಇದ್ದಾರೆಂದು ತಿಳಿಸಿದರು.
ಸಿಇಟಿ ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ದೃಷ್ಠಿಯಿಂದ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಫ್ರಿಸ್ಕಿಂಗ್, ಫೇಸ್ ರೆಕಗ್ನಿಶನ್ ಸೌಲಭ್ಯವನ್ನು ಮಾಡಲಾಗಿದೆ. ಪರೀಕ್ಷಾ ಮುನ್ನಾದಿನ ಪ್ರಾತ್ಯಕ್ಷಿಕೆಯ ಮೂಲಕ ಖಚಿತ ಪಡಿಸಿಕೊಳ್ಳಲು ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರಿಗೆ ಸೂಚನೆ ನೀಡಿದರು. ಪರೀಕ್ಷೆಗೆ ವಿಜ್ಞಾನ ಉಪನ್ಯಾಸಕರನ್ನು ಹೊರತುಪಟಿಸಿ ಇತರೆ ವಿಷಯದ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಗುರುತಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಲು ಸೂಚಿಸಿದರು.
ಪರೀಕ್ಷೆಯಲ್ಲಿ ಉಪ ಮುಖ್ಯ ಅಧೀಕ್ಷಕರ ಪಾತ್ರ ಹಾಗೂ ಜವಾಬ್ದಾರಿ ಮುಖ್ಯವಾಗಿದೆ. ಪ್ರತಿ ೨೪ ವಿದ್ಯಾರ್ಥಿಗಳಿಗೆ ಓರ್ವ ಕೊಠಡಿ ಮೇಲ್ವಿಚಾರಕರಂತೆ ನೇಮಿಸಿಕೊಳ್ಳಬೇಕು. ಇದರ ಜೊತೆಗೆ ಅಗತ್ಯವಿರುವ ಇತರೆ ಸಿಬ್ಬಂದಿಗಳನ್ನು ಸಹ ನೇಮಿಸಿಕೊಂಡು ಪರೀಕ್ಷೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದರು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಕೈಗಡಿಯಾರ ಕಟ್ಟಿಕೊಂಡು ಬರುವಂತಿಲ್ಲ. ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರವನ್ನು ಅಳವಡಿಸಲು ಕ್ರಮಕೈಗೊಳ್ಳಲು ತಿಳಿಸಿದರು.
ಪರೀಕ್ಷೆಗಳು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ನಡೆಯಲಿದ್ದು, ಎರಡು ಅವಧಿಗೆ ಮಾರ್ಗಾಧಿಕಾರಿಗಳು ಪ್ರಶ್ನೆ ಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಕೆಲಸವಾಗಬೇಕು. ಪರೀಕ್ಷಾ ಕಾರ್ಯಕ್ಕೆ ನೇಮಿಸಲಾಗುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಮಕ್ಕಳು ಪರೀಕ್ಷೆ ಬರೆಯುತ್ತಿದ್ದರೆ, ಅಂತವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡುವಂತಿಲ್ಲವೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಪಠ್ಯ ಸಾಮಗ್ರಿ, ಜಾಮಿಟ್ರಿ ಬಾಕ್ಸ್, ಕ್ಯಾಲ್ಕುಲೇಟರ್, ಮೊಬೈಲ್ ಫೋನ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳು, ಕೈಗಡಿಯಾರ, ಬಳೆ, ಯಾವುದೇ ಆಭರಣ, ಲೋಹದ ವಸ್ತುಗಳು (ಮಂಗಳ ಸೂತ್ರ ಹೊರತುಪಡಿಸಿ), ಕ್ಯಾಮರಾ, ಬ್ಲೂಟೂತ್ ಸಾಧನ ತರುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಪರೀಕ್ಷಾ ಪ್ರವೇಶ ಪತ್ರದ ಜೊತೆಗೆ ಯಾವುದಾದರೊಂದು ಗುರುತಿನ ಚೀಟಿ ತರುವುದನ್ನು ತಿಳಿಸಬೇಕು ಎಂದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಜಮಖಂಡಿ ತಹಶೀಲ್ದಾರ ಅನೀಲ ಬಡಿಗೇರ ಸೇರಿದಂತೆ ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರು ಹಾಗೂ ಮಾರ್ಗಾಧಿಕಾರಿಗಳು ಉಪಸ್ಥಿತರಿದ್ದರು.
ಪರೀಕ್ಷಾ ವೇಳಾಪಟ್ಟಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಪ್ರೀಲ್ ೨೩ ರಂದು ಬೆಳಿಗ್ಗೆ ೧೦.೩೦ ರಿಂದ ೧೧.೫೦ ವರೆಗೆ ಭೌತಶಾಸ್ತ್ರ, ಮಧ್ಯಾಹ್ನ ೨.೩೦ ರಿಂದ ೩.೫೦ ವರೆಗೆ ರಸಾಯನಶಾಸ್ತ್ರ, ಎಪ್ರೀಲ್ ೨೪ ರಂದು ಬೆಳಿಗ್ಗೆ ೧೦.೩೦ ರಿಂದ ೧೧.೫೦ ವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ ೨.೩೦ ರಿಂದ ೩.೫೦ ವರೆಗೆ ಜೀವಶಾಸ್ತ್ರ ವಿಷಯ ಪರೀಕ್ಷೆಗಳು ನಡೆಯಲಿವೆ.
WhatsApp Group Join Now
Telegram Group Join Now
Share This Article