ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಜಗತ್ತಿಗೆ ತಕ್ಕಂತೆ ತಮ್ಮನ್ನು ಅಪ್ ಡೇಟ್ ಮಾಡಿಕೊಳ್ಳಲು ಮತ್ತು ಅವರ ಲ್ಯಾಟರಲ್ ಥಿಂಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಟಿಸಿಎಸ್ ಮತ್ತು ಬೈಟ್ಸ್ (BITES) ಜಂಟಿಯಾಗಿ ‘ಟಿಸಿಎಸ್ ಟೆಕ್ ಬೈಟ್ಸ್‘ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಈ ಯೋಜನೆಯ ಹುಬ್ಬಳ್ಳಿ ವಲಯದ ಸ್ಪರ್ಧೆಯಲ್ಲಿ ಸ್ಪರ್ಧಾರ್ಥಿಗಳು ಮೊದಲು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಲಿಖಿತ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಸುತ್ತಿನಲ್ಲಿ ಆಯ್ಕೆಯಾದ ಅಗ್ರ ಆರು ತಂಡಗಳು ಅಂತಿಮ ಹಂತದ ಐದು ವಿಭಾಗಗಳ ಸಂವಾದಾತ್ಮಕ ಕ್ವಿಜ್ ನಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಜಾಣ್ಮೆ ಪ್ರದರ್ಶಿಸಿದವು.
ಹುಬ್ಬಳ್ಳಿ ಪ್ರಾದೇಶಿಕ ಸುತ್ತಿನ ಈ ಕಾರ್ಯಕ್ರಮಕ್ಕೆ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜ ಎಸ್. ಹುನಗುಂದ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ‘ಟಿಸಿಎಸ್ ಟೆಕ್ ಬೈಟ್ಸ್’ ಹುಬ್ಬಳ್ಳಿ ವಿಭಾಗದ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಟಿಸಿಎಸ್ ಟೆಕ್‌ಬೈಟ್ಸ್ ಹುಬ್ಬಳ್ಳಿ ಆವೃತ್ತಿಯ ವಿಜೇತರು 2026 ಮೇ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ನಗರವನ್ನು ಪ್ರತಿನಿಧಿಸಲಿದ್ದಾರೆ.
ಟಿಸಿಎಸ್ ಟೆಕ್ ಬೈಟ್ಸ್ ಎಂಬುದು ಎಲ್ಲಾ ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡುವ ಒಂದು ಕ್ಯಾಂಪಸ್ ಔಟ್ ರೀಚ್ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳ ಜ್ಞಾನ ಮತ್ತು ಜಾಗೃತಿಯನ್ನು ಹೆಚ್ಚಿಸುವ ಮೂಲಕ ತಂತ್ರಜ್ಞಾನ ಆಧಾರಿತ ಉದ್ಯಮದಲ್ಲಿ ಅವರು ಸ್ಪರ್ಧಿಸಲು ಶಕ್ತರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಟಿಸಿಎಸ್ ಟೆಕ್ ಬೈಟ್ಸ್ ನ ಪ್ರಾದೇಶಿಕ ಫೈನಲ್ಸ್ ಮಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ, ತುಮಕೂರು ಮತ್ತು ಬೆಂಗಳೂರು ಸೇರಿದಂತೆ ಕರ್ನಾಟಕದ ಒಟ್ಟು ಆರು ನಗರಗಳಲ್ಲಿ ನಡೆಯುತ್ತಿದೆ.


