ಸಿಂದಗಿ: ಸಂವಿದಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಜಯಂತಿಯನ್ನು ಪಕ್ಷಾತೀತವಾಗಿ ಎಲ್ಲರೂ ಆಚರಣೆ ಮಾಡಿದ್ದು ಸ್ವಾಗತಾರ್ಹ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬಸ್ ಡಿಪೋದಲ್ಲಿ ಎಸ್ಸಿ/ಎಸ್ಟಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅವರ ಚಿಂತನೆಗಳು ಮುಂದಿನ ಯುವ ಪಿಳಿಗೆಗೆ ರವಾನೆ ಆಗಬೇಕಾದರೆ ಹೆಚ್ಚೆಚ್ಚು ಗ್ರಂಥಾಲಯಗಳು ತೆರೆಯುವ ಮೂಲಕ ಅವರ ತತ್ವಗಳನ್ನು ಬಿತ್ತಬೇಕಾಗಿದೆ. ಇವರ ಜಯಂತಿಯನ್ನು ಆಚರಣೆ ಮಾಡುವುದರ ಜೊತೆಗೆ ತತ್ವದಾರ್ಶಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸಬೇಕು ಎಂದರು.
ಈ ವೇಳೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಸಿ.ಮಯೂರ ಮಾತನಾಡಿ, ಶೋಷಿತ ಸಮುದಾಯದಲ್ಲಿ ಜನಿಸಿ, ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ವಿರುದ್ದ ಬಹುದೊಡ್ಡ ಕ್ರಾಂತಿಕಾರಿ ಚಳುವಳಿ ಆರಂಭಿಸಿದ್ದಲ್ಲದೇ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಹಗಲು ರಾತ್ರಿ ಶ್ರಮಿಸಿ ಮನುಕುಲ ಒಂದೇ ಎಂಬ ಆಶಯದೊಂದಿಗೆ ವಿಶ್ವದ ಅತಿದೊಡ್ಡ ಸಂವಿಧಾನ ರಚನೆ ಮಾಡುವ ಮೂಲಕ ಸರ್ವ ಜನರ ಒಳಿತಿಗಾಗಿ ಜನಿಸಿದ ಮಹಾನ್ ಚೇತನ್ ಡಾ.ಬಾಬಾಸಾಹೇಬ ಅಂಬೇಡ್ಕರ ಎಂದರು.
ವೇದಿಕೆಯ ಮೇಲೆ ಘಟಕ ವ್ಯವಸ್ಥಾಪಕ ಎಂ.ಆರ್.ಲಮಾಣಿ, ವಲಯ ಅರಣ್ಯಾಧಿಕಾರಿ ಇರ್ಶಾದ ನೇವಾರ, ಗೋಲಗೇರಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ರವಿರಾಜ ದೇವರಮನಿ, ರುದ್ರಗೌಡ ಪಾಟೀಲ ಯಂಕಂಚಿ, ಲೆಕ್ಕಪತ್ರ ಮೇಲ್ವಿಚಾರಕ ಸಂತೋಷ ಹತ್ತರಕಿ, ಸಿಬ್ಬಂದಿ ಮೇಲ್ವಿಚಾರಕ ಆನಂದ ಬಡಿಗೇರ ಇದ್ದರು.
ಇದೇ ಸಂದರ್ಭದಲ್ಲಿ ಶ್ರೀಧರ ಇಂಗಳೆ, ಮುತ್ತಪ್ಪ ತಳ್ಳೋಳ್ಳಿ, ಬಸವರಾಜ ದ್ಯಾಮಗೊಂಡ, ಶಿವಶರಣ ಹೊಸಮನಿ, ಪರಸುರಾಮ ದೊಡಮನಿ, ಬಾಬು ಬೀಳಗಿ, ರಾಜಶೇಖರ ಕೊಣ್ಣೂರ, ಜೈಬೀಮ ಪೂಜಾರಿ, ಮರಳಪ್ಪ ಕುದರಗೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್ಸಿ/ಎಸ್ಟಿ ನೌಕರರ ಸಂಘದ ಅಧ್ಯಕ್ಷ ಸುರೇಶ ಹೊಸಮನಿ ಸ್ವಾಗತಿಸಿದರು. ಶ್ರೀಕಾಂತ ಮೆಟಗಾರ ನಿರೂಪಿಸಿದರು. ಕಾರ್ಯದರ್ಶಿ ರಾಘವೇಂದ್ರ ಜಾಬನವರ ವಂದಿಸಿದರು.


