ಗದಗ, ಎ. ೧೭ : ಗದುಗಿನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಶ್ರೀಮತಿ ಸುಜಾತಾ ಫಕೀರಗೌಡ ಪಾಟೀಲ ಅವರು ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ವಚನ ಟ್ರಸ್ಟ್ ಹಾಗೂ ಧಾರವಾಡದ ಚೇತನ್ ಫೌಂಡೇಶನ್ ಸಹಯೋಗದಲ್ಲಿ ಡಾವಣಗೆರೆಯ ರೋಟರಿ ಸಭಾಂಗಣದಲ್ಲಿ ಎರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಅತಿಥಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಬಸವ ಜಯಂತಿ ಅಂಗವಾಗಿ ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಸವ ಚೇತನ, ಬಸವಶ್ರೀ ಪ್ರಶಸ್ತಿಯೊಂದಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಡಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೆ.ಬಿ.ಪರಮೇಶ್ವರಪ್ಪ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ವಚನ ವೈಭವ ಕುರಿತು ಸಾಹಿತಿ ಬಿ.ರಂಗಸ್ವಾಮಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಪರಮೇಶ್ವರಪ್ಪ ಸಿರಗೇರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೂಡಲಗಿಯ ಎನ್.ಎಂ.ರವಿಕುಮಾರ, ಧಾರವಾಡದ ಎಲ್.ಐ.ಲಕ್ಕಮ್ಮನವರ, ಬೆಂಗಳೂರಿನ ಸಾಹಿತಿ ಯಾಸ್ಮಿನ್‌ಭಾನು ಬಿ. ಆಗಮಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡದ ಚೇತನ್ ಫೌಂಡೇಶನ್‌ದ ಅಧ್ಯಕ್ಷ ಡಾ.ಚಂದ್ರಶೇಖರ ಮಾಡಲಗೇರಿ ಬಸವ ಜಯಂತಿಯ ನಿಮಿತ್ಯವಾಗಿ ಸಾಧಕರನ್ನು ಸನ್ಮಾನಿಸುವದು ಫೌಂಡೇಶನ್‌ದ ಉದ್ದೇಶವಾಗಿದ್ದು ಬರಲಿರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಎಲ್ಲ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳುವ ಮೂಲಕ ಹಿರಿಯ ಸಾಧಕರನ್ನು ಗೌರವಿಸಲಾಗುವದು ಎಂದರು.
ರಾಷ್ಟ್ರಕೂಟ ಮಹಾಸಭಾದ ವಿಚಾರಗಳಾದ ತಂದೆ ತಾಯಿ ಇಲ್ಲದ ಮಕ್ಕಳ ಹಾಗೂ ಅಲೆಮಾರಿ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಫ್ರೀ ಕೆಟಗೇರಿ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಮಾಡುವಲ್ಲಿ, ಬಾಲ್ಯವಿವಾಹ ಹಾಗೂ ಮೂಢನಂಬಿಕೆಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವಿಕೆಯಲ್ಲಿ ಗಣನೀಯ ಕಾರ್ಯ ಮಾಡಿದ ಗದುಗಿನ ಶ್ರೀಮತಿ ಸುಜಾತಾ ಪಾಟೀಲ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.


