ಹೊಸಪೇಟೆ : ರಾಜ್ಯದ ೪೪೦೪ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ಶಾಲೆ ಶಿಕ್ಷಕರಿಗೆ ಆಂಗ್ಲ ಮಾಧ್ಯಮ ತರಬೇತಿ ನೀಡಲಾಗುತ್ತಿದೆ. ಸರ್ಕಾರವು ಇದನ್ನು ದ್ವಿಭಾಷಾ ಮಾಧ್ಯಮ ಎಂದು ಕರೆಯುತ್ತಿದ್ದರೂ ಇಂಗ್ಲಿಷಿನಲ್ಲೇ ಪಾಠ ಮಾಡಬೇಕೆಂದು ಹಲವೆಡೆ ಶಿಕ್ಷಕರಿಗೆ ನಿರ್ದೇಶನ ನೀಡಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಜೂನ್ ನಿಂದ ಕನ್ನಡ ಮಾಧ್ಯಮ ಇರುವುದಿಲ್ಲ, ಬದಲಿಗೆ ಕೇವಲ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ನೀಡಲಾಗುವುದೆಂದು ಪಾಲಕರಿಗೆ ತಿಳಿಸಲಾಗಿದೆ. ಸರ್ಕಾರದ ಈ ನಡೆಯನ್ನು ಎಐಡಿಎಸ್‌ಓ ಅತ್ಯುಗ್ರ ಪದಗಳಲ್ಲಿ ಖಂಡಿಸಿದೆ.
ಮಗುವಿನ ಸಮರ್ಪಕ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಕನಿಷ್ಠ ೫ನೇ ತರಗತಿವರೆಗೂ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಸಂವಹನದ ಭಾಷೆಯೇ ಕಲಿಕೆಯ ಭಾಷೆಯಾದಾಗ ಮಗುವು ತನ್ನ ಭಾವನೆಯನ್ನು ಸಮರ್ಪಕವಾಗಿ ವ್ಯಕ್ತಪಡಿಸಲು ಮತ್ತು ವಿಷಯಗಳನ್ನು ಗ್ರಹಿಸಲು ಸಹಾಯಕವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಈ ಅಭಿಪ್ರಾಯವನ್ನು ಸರ್ಕಾರ ಗಾಳಿಗೆ ತೂರಿದೆ. ಕೂಡಲೇ ಈ ಅವೈಜ್ಞಾನಿಕ ನಿರ್ಧಾರವನ್ನು ಹಿಂಪಡೆಯುವಂತೆ ಎಐಡಿಎಸ್‌ಓ ಆಗ್ರಹಿಸುತ್ತದೆ.
ಸರ್ಕಾರವು ಅತ್ಯಂತ ಅಪ್ರಜಾತಾಂತ್ರಿಕವಾಗಿ ಕರ್ನಾಟಕದ ವಿದ್ಯಾರ್ಥಿಗಳಿಂದ ಕನ್ನಡ ಭಾಷೆಯನ್ನೇ ಕಿತ್ತುಕೊಳ್ಳುತ್ತಿದೆ. ಇಂಗ್ಲಿಷ್ ಕಲಿಕೆ ಅವಶ್ಯಕ ನಿಜ. ಆದರೆ ಕನ್ನಡವನ್ನು ಕೊಂದು ಇಂಗ್ಲಿಷ್ ಕಲಿಸಹೊರಟಿರುವುದು ನಾಡಿನ ಜನತೆಗೆ ಮಾಡಿರುವ ದ್ರೋಹ ಹಾಗೂ ಕನ್ನಡಕ್ಕೆ ಮಾಡಿರುವ ಅಪಚಾರ. ನಾಡಿನ ವಿದ್ಯಾರ್ಥಿಗಳು, ಯುವಜನರು, ಪೋಷಕರು, ಸಾಹಿತಿಗಳು ಹಾಗೂ ಶಿಕ್ಷಣ ಪ್ರೇಮಿ ಜನತೆ ಕನ್ನಡವನ್ನು ರಕ್ಷಿಸಲು ಧ್ವನಿಯೆತ್ತಬೇಕೆಂದು ಎಐಡಿಎಸ್‌ಓ ಮನವಿ ಮಾಡುತ್ತದೆ.


