ಮೂಡಲಗಿ : ದಿನನಿತ್ಯ ಕುಲಗೋಡ ಮತ್ತು ಸುತ್ತಮುತ್ತಲಿನ ಅನೇಕ ಗ್ರಾಮಗಳ ಸಾರ್ವಜನಿಕರು ಗೋಕಾಕ. ಮೂಡಲಗಿ, ಹುಕ್ಕೇರಿ ಹಾಗೂ ಬಾಗಲಕೋಟೆ ಕಡೆಗೆ ಸಂಚಾರ ಮಾಡುತ್ತಾರೆ ಜೊತೆಗೆ ಗ್ರಾಮದ ಸುಪ್ರಸಿದ್ದ ಶ್ರೀ ಬಲಭೀಮ ದೇವರಿಗೆ ಸಾಕಷ್ಟು ಭಕ್ತಾಧಿಗಳು ಆಗಮಿಸುತ್ತಾರೆ ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕುಲಗೊಡ ಮಾರ್ಗವಾಗಿ ಹುಕ್ಕೇರಿ ಬಾಗಲಕೋಟೆ ಹೊಸ ಬಸ ಸಂಚಾರ ಪ್ರಾರಂಭಿಸಬೇಕೆಂದು ಮಾಜಿ ತಾ.ಪಂ ಸದಸ್ಯರಾದ ಸುಭಾಸ ವಂಟಗೊಡಿ ಮನವಿ ಮಾಡಿದರು.

ಶನಿವಾರದಂದು ತಾಲೂಕಿನ ಕುಲಗೋಡ ಗ್ರಾಮದ ಬಸ ನಿಲ್ದಾಣದಲ್ಲಿನ ಖಾಲಿ ಮಳಿಗೆಗಳ ಹರಾಜು ಪ್ರಕ್ರೀಯೆ ಪೂರ್ಣಗೊಂಡ ನಂತರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿಯ ಮಾನ್ಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಂ.ಆರ್.ಮುಂಜಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಪ್ರಸ್ತುತ ಗೋಕಾಕ-ಇಳಕಲ್ ಬಸ್ ಸೇವೆಯು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು. ಗೋಕಾಕದಿಂದಲೇ ಬಸ್ ಸಂಪೂರ್ಣ ಭರ್ತಿಯಾಗಿ ಕುಲಗೋಡಕ್ಕೆ ಬರುತ್ತದೆ. ಇದರಿಂದ ಕುಲಗೋಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರಿಗೆ ಆಸನ ಸಿಗದೆ ಹಲವಾರು ಬಾರಿ ಬಸ್‌ನಲ್ಲಿ ಪುಯಾಣಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು. ಉದ್ಯೋಗಸ್ಥರು, ರೈತರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹುಕ್ಕೇರಿಯಿಂದ ಘಟಪ್ರಭಾ-ಅರಭಾವಿಮಠ-ಸಂಗನಕೇರಿ-ಸತೀಶ ಶುಗರ್ಸ್-ಕುಲಗೋಡ ಯಾದವಾಡ-ಲೋಕಾಪೂರ-ಕಲಾದಗಿ ಮಾರ್ಗವಾಗಿ ಬಾಗಲಕೋಟೆಗೆ ಹೊಸ ನೇರ ಬಸ್ ಸೇವೆಯನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ವಿನಂತಿಸಿದರು. ಇದೇ ಸಂಧರ್ಭದಲ್ಲಿ ಕುಲಗೋಡ ಬಸ್ ನಿಲ್ದಾಣದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲು ಮನವಿ ಮಾಡಲಾಯಿತು. ಇತ್ತೀಚೆಗೆ ಕೌಜಲಗಿ - ಮಿರಜ್ ಬಸ್ ಬಿಡುಗಡೆ ಮಾಡಿದ್ದಕ್ಕಾಗಿ ಮುಂಜಿಯವರಿಗೆ ಗ್ರಾಮಸ್ಥರ ಪರವಾಗಿ ಸತ್ಕಾರ ಮಾಡಲಾಯಿತು.
ಈ ಸಂಧರ್ಭದಲ್ಲಿ ರಾಮಣ್ಣ ಭೈರನಟ್ಟಿ, ಬಸವರಾಜ ಯಕ್ಸಂಬಿ, ಸದಾಶಿವ ಬಡಕಲ್. ಹನಮಂತ ಚನ್ನಾಳ, ಮಂಜು ಕೊಪ್ಪದ, ಶಂಕರ ಉಮಾರಾಣಿ, ಸಾರಿಗೆ ಅಧಿಕಾರಿಗಳಾದ ಅಪ್ಪಣ್ಣ ಚಬ್ಬಿ, ಹಾಗೂ ಕುಲಗೋಡ ಬಸ್ ಸಾರಿಗೆ ನಿಯಂತ್ರಕರಾದ ಎ.ಬಿ.ಜಮಾದಾರ ಉಪಸ್ಥಿತರಿದ್ದರು.