ರಾಮದುರ್ಗ: ರೈತರಿಗೆ ನೀಡಿದ ಭರವಸೆಯಂತೆ ನಮ್ಮ ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಒತ್ತಾಯ ಮಾಡಿ ನಮ್ಮ ತಾಲೂಕು ಕೂಡಾ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಸಲಾಯಿತು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಸ್ಥಳೀಯ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದುರ್ಗ ತಾಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಯಾಗಿಲ್ಲ ಎಂಬ ಆತಂಕ ರೈತರಲ್ಲಿ ಉಂಟಾಗಿತ್ತು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರೈತರೊಂದಿಗೆ ಸಭೆ ನಡೆಸಿ ಖಂಡಿತ ಬರಗಾಲ ಘೋಷಣೆಗೆ ಮಾಡಿಸುವದಾಗಿ ಭರವಸೆ ನೀಡಿದ್ದೆ. ಅದರಂತೆ ಈ ಘೋಷಣೆ ಮಾಡಿದ್ದು, ಸದ್ಯದಲ್ಲಿಯೇ ಬರಪೀಡಿತ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.
ಸಮಯಕ್ಕೆ ಸರಿಯಾಗಿ ಮುಂಗಾರು ಮಳೆ ಬರದ ಕಾರಣ ಬಿತ್ತಿದ ಬೆಳೆಗಳು ನಾಶವಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನಲ್ಲಿ ಒಟ್ಟು ೬೨.೩೧೫ ಹೆಕ್ಟರ್ ಬಿತ್ತನೆಯಾದ ಪ್ರದೇಶ ಹೊಂದಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆಗಿಂತ ಕಡಿಮೆಯಾಗಿದ್ದು ೩೧ ಮಿಮಿ ಮಳೆಯಾಗಿದೆ. ಮತ್ತು ಸೆಪ್ಟೆಂಬರ ತಿಂಗಳಲ್ಲಿ ೧ ರಿಂದ ೧೮ ತಾರಿಖಿನವರೆಗೆ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಎಲ್ಲ ಬೆಳೆಗಳು ನಾಶವಾಗಿವೆ. ತಾಲೂಕಿನ ೧೦೩ ಹಳ್ಳಿಗಳ ಬೆಳೆಗಳನ್ನು ಕೃಷಿ ಇಲಾಖೆ, ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯವರು ಜಂಟಿ ಸರ್ವೇ ಮಾಡಿ ಮಾದರಿ ವರದಿಯನ್ನು ತಯಾರಿಸಿದ್ದು, ಅದರಲ್ಲಿ ಸುಮಾರು ೪೫.೦೦೦ ಹೆಕ್ಟರ್ ಪ್ರದೇಶದ ರೈತರ ಬೆಳೆಗಳು ನಾಶವಾಗಿದ್ದು. ನಮ್ಮ ಸರ್ಕಾರ ಮಧ್ಯಂತರ ಪರಿಹಾರವಾಗಿ ಪ್ರತಿ ರೈತರ ಖಾತೆಗೆ ರೂ. ೨೫೦೦ ಕೊಡಲು ಒಪ್ಪಿಗೆ ಸೂಚಿಸಿದೆ. ನಮ್ಮ ಸರ್ಕಾರ ರೈತರ ಸೇವೆಗೆ ಬದ್ದವಾಗಿದೆ ಎಂದು ಹೇಳಿದರು
ಅಲ್ಲದೇ ತಾಲೂಕಿನಲ್ಲಿ ಕಬ್ಬು ಕೂಡಾ ಹೆಚ್ಚಿಗೆ ಬೆಳೆಯುತ್ತಿದ್ದಾರೆ ಅವರಿಗೂ ಕೂಡಾ ಪರಿಹಾರ ಕೊಡಲು ಚಿಂತನೆ ನಡೆದಿದೆ. ಸರ್ಕಾರದ ಸುತ್ತೋಲೆ ಪ್ರಕಾರ ಎನ್.ಡಿ.ಆರ್. ಎಫ್ ಆದೇಶದಂತೆ ರೈತರಿಗೆ ಪರಿಹಾರ ನೀಡಲಾಗುವದು. ಒಣಬೇಸಾಯ ಕ್ಷೇತ್ರದ ಕೃಷಿಗೆ ಪ್ರತಿ ೧ ಹೆಕ್ಟೇರ್ ಪ್ರದೇಶಕ್ಕೆ ೮೫೦೦, ನಿರಾವರಿ ಕ್ಷೇತ್ರದ ಕೃಷಿಗೆ ಪ್ರತಿ ೧ ಹೆಕ್ಟೇರ್ ಪ್ರದೇಶಕ್ಕೆ ೧೭೦೦೦, ತೋಟಗಾರಿಕೆ ಕ್ಷೇತ್ರದ ಪ್ಲಾಂಟೇಶನ್ ಪದ್ಧತಿಯ ಕೃಷಿಗೆ ಪ್ರತಿ ೧ ಹೆಕ್ಟೇರ್ ಪ್ರದೇಶಕ್ಕೆ ೨೫೦೦೦ ಪರಿಹಾರ ನೀಡಲಾಗುವುದು. ಕೇಂದ್ರ ಹಾಗೂ ರಾಜ್ಯ ಎರಡು ಸರ್ಕಾರಗಳ ಸಹಕಾರ ಅಗತ್ಯವಾಗಿದೆ. ಈಗೀನ ವರದಿಯಂತೆ ತಾಲೂಕಿನ ರೈತರಿಗೆ ಸುಮಾರು ೫೦ ಕೋಟಿ ಪರಿಹಾರ ದೊರಯುವ ನೀರಿಕ್ಷೆ ಇದ್ದು, ಇದರಿಂದ ಎಲ್ಲ ರೈತರಿಗೆ ಅರ್ಥಿಕವಾಗಿ ಸ್ವಲ್ಪ ಅನೂಕೂಲವಾಗಲಿದೆ. ಏನೇ ಇದ್ದರು ತಾವು ಶಾಸಕರಾಗಿ ತಾಲೂಕಿನ ರೈತರಿಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡುವದಾಗಿ ಭರವಸೆ ನೀಡಿದರು.
ಏತ ನೀರಾವರಿ ಯೋಜನೆಗಳಿಗೆ ಆದ್ಯತೆ:
ತಾಲೂಕಿನ ಎರಡು ಬೃಹತ್ ಏತ ನೀರಾವರಿ ಯೋಜನೆಗಳಾದ ವೀರಭದ್ರೇಶ್ವರ ಹಾಗೂ ಸಾಲಾಪೂರ ಬಸವೇಶ್ವರ ಏತ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದು, ಈಗಾಗಲೇ ನೆನೆಗುದಿಗೆ ಬಿದ್ದಿರುವ ವೀರಭದ್ರೇಶ್ವರ ಏತ ನೀರಾವರಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಮುಂದಿನ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವದು. ಇನ್ನೂ ಸಾಲಾಪೂರ ಬಸವೇಶ್ವರ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ೨೦೨೭ರ ಮಾರ್ಚ ಅಂತ್ಯಕ್ಕೆ ನೀರು ಹರಿಸಲಾಗುವದು. ಇನ್ನೂ ಕೆರೆ ತುಂಬಿಸುವ ಯೋಜನೆಯಡಿ ಕಟಕೋಳ, ತೋರಣಗಟ್ಟಿ, ಚಂದರಗಿ, ತೋಟಗಟ್ಟಿ ಒಳಗೊಂಡು ೮ ಕೆರೆಗಳಿಗೆ ಮಲಪ್ರಭಾ ಡ್ಯಾಂನಿಂದ ನೀರು ತುಂಬಿಸುವ ಯೋಜನೆಗೆ ೮೫ ಕೋಟಿಗೆ ಟೆಂಡರ್ ಕರೆಯಲಾಗಿದ್ದು, ವರ್ಕ ಆರ್ಡರ್ ನೀಡಿದ ಕೂಡಲೇ ಕಾಮಗಾರಿಗೆ ಪ್ರಾರಂಬಿಸಲಾಗುವದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಮುಖಂಡರಾದ ಶಿದ್ಲಿಂಗಪ್ಪ ಶಿಂಗಾರಗೊಪ್ಪ, ಜಹೂರ ಹಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.