ಜಮಖಂಡಿ ; ನಗರಕ್ಕೆ ೧೫೦ ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಸ್ಥಳ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿರುವದ ರಿಂದ ಈಗಿರುವ ೧೦೦ ಹಾಸಿಗೆಗಳ ಆಸ್ಪತ್ರೆ ಸಕಾಗುತ್ತಿಲ್ಲ ಆದ್ದರಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಹೆಚ್ಚುವರಿಯಾಗಿ ೧೫೦ ಹಾಸಿಗೆಗಳ ಆಸ್ಪತ್ರೆಯನ್ನು ಮಂಜೂರು ಮಾಡಿರುವದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು. ಇದಕ್ಕಾಗಿ ೪ ಎಕರೆ ಸ್ಥಳಾವಕಾಶ ಬೇಕಾಗಿದೆ ಆದ್ದರಿಂದ ಲಭ್ಯವಿರುವ ಸ್ಥಳದ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯನ್ನು ಹೊರತು ಪಡಿಸಿದರೇ ಜಿಲ್ಲೆಯಲ್ಲಿ ಜಮಖಂಡಿ ನಗರಕ್ಕೆ ಚಿಕಿತ್ಸೆಗೆಂದು ಬರುವರ ಸಂಖ್ಯೆ ಹೆಚ್ಚಿದೆ. ನಗರದ ಹೊರವಲಯದಲ್ಲಿ ನೂತನ ಆಸ್ಪತ್ರೆ ನಿರ್ಮಿಸಿದರೇ ರೋಗಿಗಳಿಗೆ ಬಂದು ಹೋಗಲು ತೊಂದರೆ ಉಂಟಾಗುವ ಹಿನ್ನೆಲೆಯಲ್ಲಿ ಹಳೆಯ ಆಸ್ಪತ್ರೆಯ ಆವರಣದಲ್ಲಿಯೇ ನೂತನ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಇಲ್ಲಿರುವ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯ ಆವರಣದಲ್ಲಿ ಸುಮಾರು ೪ ಎಕರೆಯಷ್ಟು ಖಾಲಿ ನಿವೇಶನವಿದೆ ಆದ್ದರಿಂದ ರೋಗಿಗಳ ಅನುಕೂಲಕ್ಕೆ ಇರುವ ಸ್ಥಳದಲ್ಲೇ ನೂತನ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
.ಹೆರಿಟೇಜ್ ಕಟ್ಟಡ ಸಂರಕ್ಷಣೆ ;
ನಗರದ ಸರ್ಕಾರಿ ಆಸ್ಪತ್ರೆಯ ಪುರಾತನ ಕಟ್ಟಡವು ಪಟವರ್ಧನ ಸಂಸ್ಥಾನಿಕರ ಕಾಲದಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಕಟ್ಟಡವಾಗಿದೆ, ಅದನ್ನು ಹೆರಿಟೇಜ್ ಕಟ್ಟಡವಾಗಿ ಸಂರಕ್ಷಿಸಬೇಕು. ಹೊಸ ಆಸ್ಪತ್ರೆ ನಿರ್ಮಾಣದ ವೇಳೆ ಈ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಯೋಜನೆ ರೂಪಿಸಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಅಧಿಕಾರಿಗಳಿಗೆ ಸೂಚಿಸಿದರು. ಹೊಸ ಆಸ್ಪತ್ರೆ ನಿರ್ಮಾಣ ದಿಂದ ತಾಲೂಕಿನ ಜನರಿಗೆ ಹೆಚ್ಚಿನ ವೈದ್ಯಕೀಯ ಸೇವೆಗಳು ದೊರೆಯಲಿವೆ ಎಂಬ ವಿಶ್ವಾಸವಿದೆ ಎಂದರು,
ನ್ಯಾಯಾಲಯ ಸ್ಥಳಾಂತರಕ್ಕೆ ಪರ್ಯಾಯ ಜಾಗ ;
ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗದ ಲಭ್ಯತೆ ಕಲ್ಪಿಸುವ ಸಲುವಾಗಿ ಕೆಲವು ಸರ್ಕಾರಿ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆದಿದೆ. ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಕಚೇರಿ ಹಾಗೂ ನ್ಯಾಯಾಲಯದ ಕಟ್ಟಡಕ್ಕಾಗಿ ಪರ್ಯಾಯವಾಗಿ ಸುಮಾರು ನಾಲ್ಕು ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಕುರಿತು ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಆಶಾ ಕಾರ್ಯಕರ್ತರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆಸ್ಪತ್ರೆಯ ಆವರಣದಲ್ಲಿಯೇ ವ್ಯವಸ್ಥೆ ಮಾಡುವ ಕುರಿತು ಚಿಂತನೆ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಆರೈಕೆ ಕೇಂದ್ರವನ್ನು ಆರಂಭಿಸುವುದಕ್ಕೆ ಒತ್ತು ನೀಡಲಾಗಿದೆ ಎಂದರು. ಮಹೇಶ ಕೋಳಿ, ಧಾನೇಶ ಘಟಗೆ, ಎ.ಆರ್.ಶಿಂದೆ, ಕುಮಾರ ಆಲಗೂರ, ಸಂಜು ಮೀಸಿ, ಬಸವರಾಜ ಹರಕಂಗಿ, ಪುಟ್ಟು ಪಾಣಿ, ಅಕ್ಬರ ಜಮಾದಾರ, ಮೀರಾ ಒಂಟಮೂರಿ, ಪ್ರಹ್ಲಾದ ಕುಲಕರ್ಣಿ,
ಮಲ್ಲು ಶಿರಹಟ್ಟಿ, ಅಶೋಕ ಕರಜಗಿ, ಮೈನೂದಿನ ಕಾಟೀಕ, ಪರಶುರಾಮ ನಾಟಿಕರ ಮುಂತಾದವರಿದ್ದರು.