ಬೆಳಗಾವಿ: ಕರ್ನಾಟಕ ಸರ್ಕಾರದ ಮಾಜಿ ಲೋಕೋಪಯೋಗಿ ಸಚಿವರು, ಬೈಲಹೊಂಗಲ ನಾಡಿನ ಹಿರಿಯ ರಾಜಕಾರಣಿಗಳು ಹಾಗೂ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಿವಾನಂದ ಕೌಜಲಗಿ ಅವರ ನಿಧನಕ್ಕೆ ಶಾಸಕಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವಾನಂದ ಕೌಜಲಗಿ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವಾಗಿದೆ. ತಮ್ಮ ಇಡೀ ಜೀವನವನ್ನು ಶಿಕ್ಷಣ, ಸಹಕಾರ ಹಾಗೂ ಸಮಾಜಸೇವೆಗೆ ಮುಡಿಪಾಗಿಟ್ಟಿದ್ದ ಅವರು, ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಮತ್ತು ಸೇವಾ ಮನೋಭಾವದಿಂದ ಗುರುತಿಸಿಕೊಂಡಿದ್ದರು ಎಂದು ಲಕ್ಷ್ಮೀ ಹೆಬ್ಬಾಳಕರ್ ಸ್ಮರಿಸಿದ್ದಾರೆ.
ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಹಾಗೂ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಮಹತ್ವದ್ದಾಗಿದೆ. ವಿಶೇಷವಾಗಿ ಬೈಲಹೊಂಗಲ ಭಾಗದ ಅಭಿವೃದ್ಧಿ, ಶಿಕ್ಷಣ ಸಂಸ್ಥೆಗಳ ಪ್ರಗತಿ ಹಾಗೂ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿರಲಿದೆ. ಅವರ ಜನಪರ ಕಾಳಜಿ, ದೂರದೃಷ್ಟಿ ಹಾಗೂ ಸಮಾಜಮುಖಿ ಚಿಂತನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ನಾಯಕನ ಅಗಲಿಕೆಯಿಂದ ಸಾರ್ವಜನಿಕ ಜೀವನಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತನು ಅವರ ದಿವ್ಯಾತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದ ಸದಸ್ಯರು, ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.