ಎಂ.ಕೆ.ಹುಬ್ಬಳ್ಳಿ: ರೈತರು ಹಾಗೂ ಕಾರ್ಮಿಕರ ಅಭಿವೃದ್ಧಿಯೇ ನಮ್ಮ ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಕೇನ್ ಕ್ಯಾರಿಯರ್ ಪೂಜೆ, ಮಿಲ್ಸ್ ಅಡಿಗಲ್ಲು ಪೂಜೆ ಹಾಗೂ ಕಾರ್ಖಾನೆಯ ನೂತನ ಲಾಂಛನ ಅನಾವರಣ ಸಮಾರಂಭದ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ವಿವಿಧ ಮಠಾಧೀಶರ ಅಮೃತ ಹಸ್ತದಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಪೂಜಾ ಕಾರ್ಯಕ್ರಮಗಳು ಹಾಗೂ ನೂತನ ಲಾಂಛನ ಅನಾವರಣ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮುಂಬರುವ ಕಬ್ಬು ನುರಿಸುವ ಹಂಗಾಮಿಗೆ ಸಿದ್ಧತೆಗಳ ಭಾಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ರೈತರು, ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.
ಕಾರ್ಖಾನೆಯ ಪ್ರಗತಿ ಮತ್ತು ಅಭಿವೃದ್ಧಿಯ ಕುರಿತು ಮಾತನಾಡಿದ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ, ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗೆ ನಮ್ಮ ಸಂಸ್ಥೆ ಸದಾ ಆದ್ಯತೆ ನೀಡಲಿದೆ. ಕಾರ್ಖಾನೆಯ ಬೆಳವಣಿಗೆಗೆ ಕಬ್ಬು ಬೆಳೆಗಾರರ ವಿಶ್ವಾಸ, ರೈತ ಮುಖಂಡರ ಮಾರ್ಗದರ್ಶನ ಹಾಗೂ ಕಾರ್ಮಿಕರ ಶ್ರಮ ಮಹತ್ವದ ಪಾತ್ರ ವಹಿಸುತ್ತವೆ. ಎಲ್ಲರ ಸಹಕಾರದೊಂದಿಗೆ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮ ಸಂಕಲ್ಪವಾಗಿದೆ ಎಂದರು.
ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ರೈತರು ಮತ್ತು ಕಾರ್ಮಿಕರ ಸಹಕಾರದಿಂದ ಕಾರ್ಖಾನೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸವಿದೆ. 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಎಲ್ಲರ ಬದುಕಿನಲ್ಲಿ ಸಮೃದ್ಧಿ, ಸಂತೋಷ ಹಾಗೂ ಯಶಸ್ಸನ್ನು ತರಲಿ ಎಂದು ಅವರು ಹಾರೈಸಿದರು.
ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಗೌರವಾನ್ವಿತ ರೈತ ಮುಖಂಡರು, ಕಬ್ಬು ಬೆಳೆಗಾರರು, ಆಡಳಿತ ಮಂಡಳಿ ಸದಸ್ಯರು, ಕಚೇರಿ ಸಿಬ್ಬಂದಿ ಹಾಗೂ ಹಿತೈಷಿಗಳಿಗೆ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರಗತಿಪರ ರೈತರನ್ನು ಗೌರವಿಸಿ ಸನ್ಮಾನಿಸಲಾಯಿತು. ರೈತರ ಸಾಧನೆ ಹಾಗೂ ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಗುರುತಿಸುವ ಮೂಲಕ ಕೃಷಿ ವಲಯದಲ್ಲಿ ಇನ್ನಷ್ಟು ಸಾಧನೆಗೆ ಪ್ರೋತ್ಸಾಹ ನೀಡಲಾಯಿತು.
ಕಾರ್ಯಕ್ರಮವು ರೈತರು, ಕಾರ್ಮಿಕರು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯವರಲ್ಲಿ ಹೊಸ ನಿರೀಕ್ಷೆ ಮತ್ತು ಉತ್ಸಾಹ ಮೂಡಿಸಿತು.
ಕಾರ್ಖಾನೆ ಅಭಿವೃದ್ಧಿಗೆ ಸಹಕಾರ :ಬಾಬಾಸಾಹೇಬ ಪಾಟೀಲ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಹಾಗೂ ರೈತರ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೈಲೂರ ಶ್ರೀ ನಿಜಗುಣ ಶಿವಯೋಗಿ ಮಹಾಸ್ವಾಮಿಗಳು,ಶ್ರೀ ಪಾಲಾಕ್ಷ ಮಹಾಸ್ವಾಮಿಗಳು, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಆಡಳಿತ ಮಂಡಳಿ ಸದಸ್ಯರು, ರೈತರು ಭಾಗವಸಿದ್ದರು.