ಇಂಡಿ: ೧೬ನೇ ಶತಮಾನದಲ್ಲೇ ಬೆಂಗಳೂರನ್ನು ಭವಿಷ್ಯದ ಜಾಗತಿಕ ನಗರವಾಗಿ ಕಲ್ಪಿಸಿಕೊಂಡಿದ್ದ ಕೆಂಪೇಗೌಡರ ಸಮಗ್ರ ನಗರಾಭಿವೃದ್ಧಿ, ಪರಿಸರ ಕಾಳಜಿ, ಜನಪರ ಆಡಳಿತ ಮಂತ್ರವು ಇಂದಿಗೂ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಉದ್ಧೇಶಿಸಿ ಅವರು ಮಾತನಾಡಿದರು.
ಕೆಂಪೇಗೌಡರು ತಮ್ಮ ದಾರ್ಶನಿಕ ಯೋಜನೆಗಳ ಜತೆಗೆ ವಿವಿಧ ಕುಲಕಸುಬಿನವರಿಗೆ ನೆಲೆಸಲು ೬೪ ಪೇಟೆ ಕಟ್ಟಿ ಬೆಂಗಳೂರು ಕುಶಲತೆಯ ತವರಾಗಿಸಿ ಅಭಿವೃದ್ಧಿಗೆ ಅಂದೇ ಪೀಠಿಕೆ ಹಾಕಿದರು.ಸಾವಿರ ಕೆರೆ ನಿರ್ಮಿಸಿದ ಕೀರ್ತಿ ಇವರದು. ಎಲ್ಲ ಜಾತಿ-ಧರ್ಮದ ಜನರನ್ನು ಒಟ್ಟಿಗೆ ಕರೆದೊಯ್ಯುವ ಮೂಲಕ ಸರ್ವಜನಾಂಗದ ಶಾಂತಿಯ ತೋಟಕ್ಕೆ ಭದ್ರ ಅಡಿಪಾಯ ಹಾಕಿದರು ಎಂದು ಹೇಳಿದರು.
ಅಂತರ್ಜಲ ಕುಸಿಯುತ್ತಿರುವ ಮತ್ತು ನೀರಿನ ಅಭಾವದ ಇಂದಿನ ದಿನಗಳಲ್ಲಿ, ಕೆಂಪೇಗೌಡರ ನೀರು ನಿರ್ವಹಣಾ ತಂತ್ರಗಳು ಇಡೀ ಜಗತ್ತಿಗೆ ಮಾದರಿ ಆಗಿವೆ. ಕೆರೆ ನಿರ್ಮಿಸಿ, ಮರ ನೆಡು ಎಂಬ ಅವರ ಮಂತ್ರ ಪರಿಸರ ಕಾಳಜಿಯ ಪ್ರತೀಕವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರು ಇಂದು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡಲು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಗೆ ಆಕರ್ಷಕ ತಾಣವಾಗಲು ಕೆಂಪೇಗೌಡರು ಅಂದು ಬಿತ್ತಿದ ವಾಣಿಜ್ಯ ಸ್ನೇಹಿ ವಾತಾವರಣವೇ ಕಾರಣ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ಮಕ್ಕಳು ಹಾಜರಿದ್ದರು.
