ಹಸಿರು ಕ್ರಾಂತಿ ವರದಿ ಮುದ್ದೇಬಿಹಾಳ/ ತಾಳಿಕೋಟೆ
ಅಪ್ಪಾಜಿ ನಾಡಗೌಡರು ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿಕೊಂಡು ಬಂದಿದ್ದು, ಇದು ನನ್ನ ಗಮನದಲ್ಲಿದೆ. ಅಪ್ಪಾಜಿ ನಾಡಗೌಡರು ನನ್ನ ಸ್ನೇಹಿತರಾಗಿದ್ದು, ನನ್ನ ಸಚಿವ ಸಂಪುಟದಲ್ಲಿ ಇರಬೇಕೆಂಬ ಆಸೆಯು ನನ್ನದಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ಕುಮಾರ ಕೃಪಾ ಗೆಸ್ಟ್ ಹೌಸ್‌ನಲ್ಲಿ ಶುಕ್ರವಾರ ಭೇಟಿ ನೀಡಿದ ಮುದ್ದೇಬಿಹಾಳ ಕ್ಷೇತ್ರದಿಂದ ಬೆಂಗಳೂರಿಗೆ ತೆರಳಿದ್ದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸುದೀರ್ಘ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ನಾಡಗೌಡರಿಗೆ ಸ್ಥಾನ, ಮಾನ ಸಿಗಬೇಕೆಂದು ನ್ಯಾಯಯುತ ಬೇಡಿಕೆ ಮಂಡಿಸಲು ಬಂದಿದ್ದೀರಿ. ನೀವು ಇಲ್ಲಿಗೆ ಬರುವ ಅವಶ್ಯಕತೆ ಇದ್ದಿರಲಿಲ್ಲ. ಕಾಂಗ್ರೆಸ್ ಪಕ್ಷ ಇಷ್ಟೊಂದು ಬೆಳೆದು ನಿಂತಿದೆಂದರೇ ನಿಮ್ಮಂತಹ ನಿಷ್ಠಾವಂತ ಕಾರ್ಯಕರ್ತರ ಶ್ರಮ ಅಡಗಿದೆ. ನಿಮ್ಮೆಲ್ಲರ ಅಭಿಮಾನ, ಪ್ರೀತಿ, ವಿಶ್ವಾಸ ನಾನೆಂದೂ ಮರೆಯುವುದಿಲ್ಲ. ನಾಡಗೌಡರು ಹೇಗೆ ಸೌಮ್ಯ ಸ್ವಭಾವದವರಾಗಿದ್ದರೋ ಹಾಗೆಯೇ ನೀವೂ ಕೂಡ ಸೌಮ್ಯ, ಶಾಂತಿಯಿಂದ ಬೇಡಿಕೆ ಮಂಡಿಸಿರುವುದು ನನಗೆ ಹಿಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ವೈ.ಎಚ್. ವಿಜಯಕರ ಮಾತನಾಡಿದರು.
ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಖರ್ಗೆ, ರಾಹುಲ್‌ಗೆ ಮನವವರಿಕೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಭರವಸೆ
ಅಪ್ಪಾಜಿ ನಾಡಗೌಡರಂತಹ ಅನುಭವಿ ಮತ್ತು ಪಕ್ಷನಿಷ್ಠ ನಾಯಕನಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದರಿಂದ ಪಕ್ಷಕ್ಕೂ ಸರ್ಕಾರಕ್ಕೂ ಮತ್ತಷ್ಟು ಬಲ ಸಿಗಲಿದೆ. ನಿಮ್ಮ ಬೇಡಿಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್ ಗಾಂಧಿಯವರಿಗೆ ಮನವರಿಕೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭರವಸೆ ನೀಡಿದರು.
ಬೆಂಗಳೂರಿನ ಕೆಪಿಸಿಸಿ ಕಾರ್ಯಾಲಯಕ್ಕೆ ಶುಕ್ರವಾರ ಶಾಸಕ ಅಪ್ಪಾಜಿ ನಾಡಗೌಡರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವಂತೆ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ ಸುಮಾರು 600ಕ್ಕೂ ಅಧಿಕ ಜನರ ನಿಯೋಗ ಭೇಟಿ ನೀಡಿ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಅಪ್ಪಾಜಿ ನಾಡಗೌಡ ಅವರನ್ನು ಯುವ ಕಾಂಗ್ರೆಸ್ ದಿನಗಳಿಂದಲೂ ಸುಮಾರು 45 ವರ್ಷಗಳಿಂದ ನಾನು ಹತ್ತಿರದಿಂದ ಬಲ್ಲೆ. ಪಕ್ಷದ ಸಂಘಟನೆಗಾಗಿ ಅವರು ಸಲ್ಲಿಸಿರುವ ಸೇವೆ, ಪಕ್ಷದ ಮೇಲಿನ ಅಚಲ ನಿಷ್ಠೆ ಹಾಗೂ ಜನಪರ ಕಾರ್ಯವೈಖರಿ ಸ್ವತಃ ಕಂಡಿದ್ದೇನೆ. ಇಷ್ಟೊಂದು ಸುದೀರ್ಘ ರಾಜಕೀಯ ಅನುಭವ ಮತ್ತು ಪಕ್ಷಕ್ಕಾಗಿ ದುಡಿದಿರುವ ಅವರ ಸೇವೆ ಪರಿಗಣಿಸಿದರೇ ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯಯುತವಾಗಿದೆ ಎಂದು ತಿಳಿಸಿದರು.
ಸೇವೆ ಪರಿಗಣಿಸಿ ಸಂಪುಟದಲ್ಲಿ ಸ್ಥಾನ ನೀಡಲು ಒಕ್ಕೊರಲ ಆಗ್ರಹ:
6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಪ್ಪಾಜಿ ನಾಡಗೌಡರು ಸುಮಾರು 4 ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು, ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದ ಅಜಾತಶತ್ರು ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಜನತಾದಳದ ಭದ್ರಕೋಟೆಯಾಗಿದ್ದ ಮುದ್ದೇಬಿಹಾಳ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಪರಿವರ್ತಿಸುವಲ್ಲಿ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ)ರ ಪಾತ್ರ ಮಹತ್ವದ್ದಾಗಿದೆ. ಪಕ್ಷದ ಹೈಕಮಾಂಡ್‌ನ ಎಲ್ಲ ನಿರ್ಧಾರಗಳನ್ನು ಗೌರವಿಸುತ್ತ ಶಿಸ್ತಿನ ಸಿಪಾಯಿಯಾಗಿ ಕಾರ್ಯನಿರ್ವಹಿಸಿರುವ ಅವರ ಸೇವೆ ಪರಿಗಣಿಸಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು. ಎಂದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಿಎಂ ಡಿ.ಕೆ.ಶಿವಕುಮಾರ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ಯೇಕ ಮನವಿ ಸಲ್ಲಿಸಿ ಒಕ್ಕೊರಿಲಿನಿಂದ ಆಗ್ರಹಿಸಿದರು.
ಈ ವೇಳೆ ಮುದ್ದೇಬಿಹಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿದರು.
ಈ ವೇಳೆ ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಅಕ್ಷತಾ ಚಲವಾದಿ, ಮಾಬುಬಿ ಬಾಗವಾನ, ನೀಲಮ್ಮ ಚಲವಾದಿ, ಪ್ರೀತಿ ದೇಗಿನಾಳ, ಎಸ್.ಸಿ.ಘಟಕದ ತಾಲೂಕಾಧ್ಯಕ್ಷ ಶ್ರೀಕಾಂತ ಚಲವಾದಿ, ಹಣಮಂತ ಕುರಿ, ತಿಪ್ಪಣ್ಣ ದೊಡಮನಿ, ಸಂತೋಷ ಚವ್ಹಾಣ, ಸಿ.ಜಿ.ವಿಜಯಕರ, ಕಾಶೀಮ್ ಪಟೇಲ, ಹರೀಶ ಬೇವೂರ, ಸಿಕಂದರ್ ಜಾನ್ವೇಕರ್, ಸಂಗನಗೌಡ ಬಿರಾದಾರ, ಬಿ.ಕೆ.ಬಿರಾದಾರ, ಎ.ಗಣೇಶ ಅನ್ನಿಗೌನಿ, ಎಂ.ಎನ್.ಮದರಿ, ಶಶಿಕಾಂತ ಮಾಲಗತ್ತಿ, ಎಂ.ಎಚ್.ಹಾಲಣ್ಣವರ, ಬಿ.ಎ.ನಾಡಗೌಡ, ಸಿದ್ದಗೌಡ ಪಾಟೀಲ, ಬಸವರಾಜ ಕಟ್ಟಿಮನಿ, ಸಿ.ಪಿ.ಸಜ್ಜನ, ದಾನಪ್ಪ ನಾಗಠಾಣ, ರಾಯನಗೌಡ ತಾತರೆಡ್ಡಿ, ಬಸನಗೌಡ ಪಾಟೀಲ, ಯಂಕಪ್ಪ ಚಲವಾದಿ, ಪೀರಸಾಬ್ ಮಕಾಂದಾರ, ಮೆಹಬೂಬ್ ಬಾಗವಾನ, ಬಾಪುರಾಯ ದೇಸಾಯಿ(ಹಡಗಲಿ), ಸುರೇಶಗೌಡ ಪಾಟೀಲ, ಶ್ರೀಶೈಲ ಮರೊಳ, ರಾಜು ಕೊಂಗಡಿ, ಮಲಿಕಸಾಬ್ ನದಾಫ್, ಅಶೋಕ ಪಾದಗಟ್ಟಿ, ರಾಮು ಲಮಾಣಿ, ಕಾಮರಾಜ ಬಿರಾದಾರ, ಶಿವು ಶಿವೊಪುರ, ರಮೇಶ ಓಸ್ವಾಲ್, ಮೆಹಬೂಬ್ ಗೊಳಸಂಗಿ, ಪ್ರಶಾಂತ ಕಾಳೆ, ಪ್ರಭುರಾಜ ಕಲಬುರ್ಗಿ, ಜಬ್ಬಾರ ಗೋಲಂದಾಜ, ಮಹಾದೇವಿ ಚಲವಾದಿ, ಕಸ್ತೂರಿಬಾಯಿ ಪೀರಾಪೂರ, ಲಲಿತಾ ಇಲಕಲ್ಲ, ನೀರ್ಮಲಾ ಬಜಂತ್ರಿ ಇತರರು ಇದ್ದರು.
8 ಬಾರಿ ಚುನಾವಣೆಯಲ್ಲಿ ನಾಡಗೌಡರು ಸ್ಪರ್ಧಿಸಿ 6 ಬಾರಿ ಗೆದ್ದಿದ್ದಾರೆ. ಮಾಧ್ಯಮದವರು ಹಾಗೂ ನಿಮ್ಮೆಲ್ಲರ ಮುಂದೆ ಓಪನ್ ಆಗಿ ಹೇಳಲಿಕ್ಕೆ ಆಗಲ್ಲ. ಪ್ರಾಮಾಣಿಕವಾಗಿ ಅವರು ಸಚಿವರಾಗಲು ಅರ್ಹರಿದ್ದಾರೆಂದು ಪಕ್ಷದ ಹೈಕಮಾಂಡ್ ತಿಳಿಸುವ ಕಾರ್ಯ ಮಾಡುತ್ತೇನೆ. ನಾಡಗೌಡರಿಗೆ ಒಳ್ಳೆಯದನ್ನು ಮಾಡಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನಾಡಗೌಡರು ಹಾಗೂ ನಿಮಗೂ ಶುಭವಾಗಲಿ.
- ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ.
ಈ ಹಿಂದೆಯೇ ಸಿದ್ದರಾಮಯ್ಯ ಸರ್ಕಾರದಲ್ಲಿ ನಾಡಗೌಡರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಯಾವುದೋ ಕಾರಣದಿಂದ ಮಂತ್ರಿ ಸ್ಥಾನ ತಪ್ಪಿಹೋಗಿತ್ತು. ಈಗ ಸರಿಪಡಿಸುವ ಕಾಲ ಬಂದಿದೆ. ಈ ಕುರಿತು ಹೈಕಮಾಂಡ್‌ಗೆ ಮನವರಿಕೆ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ.
- ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರು.
