ಬಳ್ಳಾರಿ,ಜೂ.27:ನಾಡಿನ ಏಳಿಗೆಗಾಗಿ ಶ್ರಮಿಸಿದ ಎಲ್ಲಾ ಮಹನೀಯರ ಜಯಂತಿಗಳನ್ನು ಸರ್ಕಾರವು ಸಡಗರದಿಂದ ಆಚರಿಸುವ ಮೂಲಕ ಅವರ ಕೊಡುಗೆಗಳನ್ನು ಸ್ಮರಿಸುತ್ತಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮೆಲ್ಲರ ಹೆಮ್ಮೆಯ ಬೆಂಗಳೂರು ನಗರದ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಅತ್ಯಂತ ವೈವಿಧ್ಯಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಇಂದು ನಾವು ಅನುಭವಿಸುತ್ತಿರುವ ಸುಂದರ ಪರಿಸರ, ನಮ್ಮ ಊರು, ನಾಡು, ಜಲ, ಮತ್ತು ಭಾಷೆಯ ಶ್ರೀಮಂತಿಕೆಗೆ ಅಂದಿನ ಮಹಾತ್ಮರ ಮತ್ತು ಹಿರಿಯರ ನಿಸ್ವಾರ್ಥ ಕೊಡುಗೆಯೇ ಕಾರಣ. ಈ ಇತಿಹಾಸ ಮತ್ತು ಮಹನೀಯರ ಸಾಧನೆಗಳನ್ನು ಇಂದಿನ ವಿದ್ಯಾರ್ಥಿ ದೆಸೆಯ ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡುವುದು ಮತ್ತು ಅವರ ಆದರ್ಶಗಳನ್ನು ಸಮಾಜದಲ್ಲಿ ಮರುಸ್ಥಾಪಿಸುವುದು ಈ ಜಯಂತಿ ಆಚರಣೆಗಳ ಮುಖ್ಯ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ತೀರಾ ಚಿಕ್ಕ ವಯಸ್ಸಿನಲ್ಲೇ ಶ್ರೀಕೃಷ್ಣದೇವರಾಯರ ಆಸ್ಥಾನಕ್ಕೆ ಭೇಟಿ ನೀಡಿದ್ದರು. ವಿಜಯನಗರ ಸಾಮ್ರಾಜ್ಯದ ವೈಭವ, ಅಲ್ಲಿನ ಸಂಪತ್ತು, ಕಟ್ಟಡಗಳು ಹಾಗೂ ದೇವಸ್ಥಾನಗಳನ್ನು ಕಂಡು ಪ್ರೇರಿತರಾಗಿದ್ದ ಅವರು, ತಾವೂ ಕೂಡ ಇಂತಹದೊಂದು ಸುಂದರ ನಾಡನ್ನು ಕಟ್ಟಬೇಕೆಂಬ ದೊಡ್ಡ ಕನಸನ್ನು ಕಂಡಿದ್ದರು. ಅವರ ಆ ಕನಸಿನ ಫಲವೇ ಇಂದಿನ ಬೆಂಗಳೂರು ಎಂದು ಅವರು ಸ್ಮರಿಸಿದರು.
ಈಗಿನ ಯುವಪೀಳಿಗೆ ಕೆಂಪೇಗೌಡರಂತೆಯೇ ನಾಡು ಕಟ್ಟಬೇಕೆಂದೇನಿಲ್ಲ. ಸಮಾಜದಲ್ಲಿ ಒಬ್ಬ ಜಿಲ್ಲಾಧಿಕಾರಿ, ಎಸ್‌ಪಿ, ರಾಜಕಾರಣಿ, ಸಂಗೀತಗಾರ ಅಥವಾ ಯಶಸ್ವಿ ಪುರುಷರನ್ನು ನೋಡಿದಾಗ, ನಾನು ಕೂಡ ಅವರಂತೆ ಸಾಧನೆ ಮಾಡಬೇಕೆಂಬ ದೊಡ್ಡ ಕನಸನ್ನು ಕಾಣಬೇಕು. ಆ ಕನಸನ್ನು ನನಸಾಗಿಸಲು ಶ್ರಮಿಸುವುದೇ ನಾವು ಕೆಂಪೇಗೌಡರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಕೆಂಪೇಗೌಡರು ಅತ್ಯಂತ ದೂರದೃಷ್ಟಿಯಿಂದ ಬೆಂಗಳೂರನ್ನು ನಿರ್ಮಿಸಿದ್ದರು. ನಾಡಿನ ರಕ್ಷಣೆಗಾಗಿ ಕೋಟೆ, ವ್ಯಾಪಾರಕ್ಕಾಗಿ ಪೇಟೆ, ದೇವರ ಸ್ಮರಣೆಗಾಗಿ ದೇವಸ್ಥಾನಗಳು ಹಾಗೂ ಪ್ರಾಣಿ-ಪಕ್ಷಿ ಮತ್ತು ಪರಿಸರಕ್ಕಾಗಿ ಸಾವಿರಾರು ಕೆರೆಗಳು ಹಾಗೂ ಉದ್ಯಾನವನಗಳನ್ನು ನಿರ್ಮಿಸಿದರು. ಇವತ್ತು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿಯಾಗಿ ಬೆಳಗುತ್ತಿರುವುದಕ್ಕೆ ಇಲ್ಲಿನ ಪ್ರಕೃತಿಯ ಕೊಡುಗೆ ಹಾಗೂ ಕೆಂಪೇಗೌಡರ ದೂರದೃಷ್ಟಿಯೇ ಕಾರಣ. ಅಲ್ಲದೆ, ಜಾತಿ, ಭಾಷೆಗಳ ಭೇದವಿಲ್ಲದೆ ಎಲ್ಲ ರಾಜ್ಯಗಳ ಜನರಿಗೂ ಆಶ್ರಯ ನೀಡಿರುವ ಬೆಂಗಳೂರು ಇವತ್ತು ಸಾಂಸ್ಕೃತಿಕ ವೈವಿಧ್ಯತೆಯ ಹೆಮ್ಮೆಯ ಸಂಕೇತವಾಗಿದೆ ಎಂದು ಶ್ಲಾಘಿಸಿದರು.
ಕೆಂಪೇಗೌಡರ 'ಸರ್ವರನ್ನೂ ಒಳಗೊಳ್ಳುವ' ತತ್ವದಡಿಯೇ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇತ್ತೀಚೆಗೆ ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಉಚಿತ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ನಿರ್ಧಾರ ಕೈಗೊಂಡಿರುವುದನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶಶಿಕಾಂತ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕೆಂಪೇಗೌಡರು ಯಲಹಂಕ ನಾಡಪ್ರಭುಗಳಾಗಿದ್ದ ಜಯಗೌಡರ ವಂಶಸ್ಥರು. ಇವರ ತಂದೆ ಕೆಂಪನಂಜೇಗೌಡರು. ಕ್ರಿ.ಶ. 1510 ರಲ್ಲಿ ಜನಿಸಿದ ಕೆಂಪೇಗೌಡರು ಚಿಕ್ಕಂದಿನಿಂದಲೇ ಧೀರರೂ, ಕಲೆ ಮತ್ತು ಸಾಹಿತ್ಯ ಪ್ರೇಮಿಗಳೂ ಆಗಿದ್ದರು. ಕೆಂಪೇಗೌಡರು ನ್ಯಾಯಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ, ತರ್ಕಶಾಸ್ತ್ರ, ತತ್ವಶಾಸ್ತ್ರಗಳ ಜೊತೆಗೆ ಖಡ್ಗ ವಿದ್ಯೆ, ಆಡಳಿತ, ಧರ್ಮನಿಷ್ಠೆ, ರಾಜ್ಯಭಾರ ಹಾಗೂ ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡರು.
ಕ್ರಿ.ಶ. 1515ರಲ್ಲಿ ಮೊದಲ ಬಾರಿಗೆ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದರು ಎಂದು ಕೆಂಪೇಗೌಡರ ಜೀವನ ಚರಿತ್ರೆ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು. ಬಳ್ಳಾರಿಯ ಎಸ್.ಲಕ್ಷ್ಮಿ ಪವನ್ ಕುಮಾರ್ ತಂಡ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಡಾ.ಗಿರೀಶ್ ಕುಮಾರ್ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಮುಖಂಡರಾದ ವಿಷ್ಣು ಸೇರಿದಂತೆ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
