ಬಳ್ಳಾರಿ: 17:..80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ, ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಜಾಗತಿಕ ವೇದಿಕೆ (ರಿ.) ಬೆಂಗಳೂರು ಹಾಗೂ ಶ್ರೀ ಮಹಾದೇವ ಶಿಕ್ಷಣ, ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ.) ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ “ಭಾರತ ಮಾತೆಗೆ ಭಾವೈಕ್ಯತೆಯ ಆರತಿ – 2026” ವಿಶೇಷ ದೇಶಭಕ್ತಿ ಗೀತಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿರುವ ಎಸ್.ಜಿ. ಕಾಲೇಜು ಮೈದಾನದಲ್ಲಿ ನಡೆದ ಈ ಸಂಭ್ರಮದ ಸಮಾರಂಭದಲ್ಲಿ ‘ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಜಾಗತಿಕ ವೇದಿಕೆ’ ಯನ್ನು ಅಧಿಕೃತವಾಗಿ ಉದ್ಘಾಟಿಸಿ, ಸಂಘಟನೆಯ ಲೋಗೋವನ್ನು (ಗುರುತು) ಬಿಡುಗಡೆ ಮಾಡಲಾಯಿತು.
ಕೊಪ್ಪಳ ಗವಿಮಠದ ಕಡಲಬಾಳು ಶಾಖಾ ಮಠದ ಪರಮಪೂಜ್ಯ ಶ್ರೀ ಮರಿ ಶಾಂತವೀರ ಮಹಾಸ್ವಾಮೀಜಿಗಳು ಜ್ಯೋತಿ ಬೆಳಗಿಸುವ ಮೂಲಕ ಸಂಸ್ಥೆಗೆ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿಯವರು, "ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಜಾಗತಿಕ ವೇದಿಕೆಯು ರಾಜ್ಯಾದ್ಯಂತ ಶಕ್ತಿಯುತವಾಗಿ ಸಂಘಟಿತಗೊಂಡು, ಸಮಾಜಮುಖಿ ಹಾಗೂ ನಾಡಿನ ಒಳಿತಿನ ಕೆಲಸಗಳನ್ನು ಮಾಡಲು ಆ ಭಗವಂತ ಹೆಚ್ಚಿನ ಶಕ್ತಿ ನೀಡಲಿ," ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಹಿರಿಯ ಧುರೀಣರು ಹಾಗೂ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ಸಿರಿಗೇರಿ ಪನ್ನರಾಜ್, ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಬಿಚ್ಚಗಲ್ಲು ಪಂಚಾಕ್ಷರಪ್ಪ, ಸುರೇಖಾ ಮಲ್ಲನಗೌಡ, ಹೊಳಲಗುಂದಿ ವೀರೇಶ್ ಸ್ವಾಮಿ, ಮದಿರೆ ಕುಮಾರಸ್ವಾಮಿ, ಹಳ್ಳಿ ಮನೆ ದೊಡ್ಡಬಸಪ್ಪ ಸೇರಿದಂತೆ ಹಲವು ಪ್ರಮುಖ ವೀರಶೈವ ಮುಖಂಡರು ಭಾಗವಹಿಸಿದ್ದರು.
ಸಂಘಟನೆಯ ಪದಾಧಿಕಾರಿಗಳಾದ ಕಲ್ಲು ಕಂಬ ಪ್ರಭುಶೇಖರಗೌಡ, ಬಿಸಿಲಹಳ್ಳಿ ಬಸವರಾಜ್, ಜೆ.ವಿ. ಮಂಜುನಾಥ, ಬಸವರಾಜ್ ಪಾಟೀಲ್, ಗಂಗಾವತಿ ಪ್ರವೀಣ್ ಕುಮಾರ್, ಮಾನ್ವಿ ಶರಣಯ್ಯ ಸ್ವಾಮಿ, ಎಸ್. ಸುರೇಂದ್ರ, ಶಿವಕುಮಾರ್ ಸ್ವಾಮಿ ಹಿರೇ ಕೊಟ್ನಕಲ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
700ಕ್ಕೂ ಹೆಚ್ಚು ಕಲಾವಿದರಿಂದ ಸಾಂಸ್ಕೃತಿಕ ವೈಭವ: ಕಾರ್ಯಕ್ರಮದ ಅಂಗವಾಗಿ ದೇಶಭಕ್ತಿ ಗೀತೆ, ನೃತ್ಯ, ಯೋಗ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು. ಬಳ್ಳಾರಿಯ ನೃತ್ಯ ಗುರುಗಳು, ಸಂಗೀತ ಶಿಕ್ಷಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ 700ಕ್ಕೂ ಹೆಚ್ಚು ಕಲಾವಿದರು ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮನಸೂರೆಗೊಂಡರು. ಭಾಗವಹಿಸಿದ ಎಲ್ಲಾ ನೃತ್ಯ ಗುರುಗಳು, ಸಂಗೀತ ಶಿಕ್ಷಕರು ಮತ್ತು ಕಲಾವಿದರಿಗೆ ಪ್ರಶಂಸಾ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗಣ್ಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.