ಬೆಳಗಾವಿ : ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಳಿ ತಪ್ಪಿದಾಗ ದಿಟ್ಟತನದಿಂದ ಅವುಗಳನ್ನು ಎಚ್ಚರಿಸುವ ಕಾರ್ಯವನ್ನು ಪತ್ರಿಕಾರಂಗ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಬೆಳಗಾವಿ ರಾಣಿ ಚನ್ಮಮ್ಮ ವಿಶ್ವವಿದ್ಯಾಲಯ ಕುಲಪತಿ ಸಿ.ಎಂ.ತ್ಯಾಗರಾಜ ಹೇಳಿದರು.
ನಗರದ ನಾಗನೂರ ರುದ್ರಾಕ್ಷಿ ಮಠದ ಎಸ್.ಜಿ.ಬಿ.ಐ.ಟಿ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತ ಪಾಟೀಲ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪರ್ತಕರ್ತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ತಮ್ಮ ಕಷ್ಟಗಳನ್ನು ಬದಿಗೆ ಸರಿಸಿ, ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಧೈರ್ಯ ಮತ್ತು ಲೇಖನಿ ಪತ್ರಕರ್ತ ದೊಡ್ಡ ಆಸ್ತಿಯಾಗಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆಗೆ ಪತ್ರಕರ್ತರ ಸಹಕಾರವೇ ಕಾರಣವಾಗಿದೆ ಎಂದು ಸ್ಮರಿಸಿದರು.
ಒತ್ತಡದೊಂದಿಗೆ ಕೆಲಸ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮಂಕುತಿಮ್ಮನ ಕಗ್ಗಗಳನ್ನು ಉದಾಹರಿಸಿ ಪತ್ರಕರ್ತರ ವೃತ್ತಿ ಜೀವನದ ಕೆಲವು ಕಾಳಜಿಗಳ ಸಲಹೆ ನೀಡಿದರು.
ಬೆಳಗಾವಿ ಪೊಲೀಸ್ ಉಪ ಆಯುಕ್ತ ನಾರಾಯಣ ಭರಮನಿ ಮಾತನಾಡಿ, ಎಲ್ಲ ಕ್ಷೇತ್ರಗಳ ನೂನ್ಯತೆಗಳನ್ನು ಎತ್ತಿ ತೋರಿಸಿ ಎಚ್ಚರಿಸುವ ಪತ್ರಕರ್ತರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕೋವಿಡ್ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ. ಸುದ್ದಿ ನೀಡುವ ಪೈಪೋಟಿಯಲ್ಲಿ ಸುಳ್ಳು ಮತ್ತು ಸಮಾಜದ ದಾರಿ ತಪ್ಪಿಸುವಂತಹ ಸುದ್ದಿ ನೀಡಬಾರದು ಎಂದು ಕಿವಿಮಾತು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ. ಎಂ ಮಾತನಾಡಿ, ಪತ್ರಿಕೆಗಳು ಸಮಾಜದ ಕನ್ನಡಿಯಿಲ್ಲದ, ಸುಳ್ಳು ಸುದ್ದಿಗಳು ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ಪತ್ರಿಕೆಗಳ ಮೇಲಿದೆ ಎಂದು ಎಚ್ಚರಿಸಿದರು.
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರಸಾದ ರಾಂಪೂರೆ ಮಾತನಾಡಿ, ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಿಕಾ ಮಾಧ್ಯಮ ಅತ್ಯಂತ ಬಲಿಷ್ಠವಾಗಿದೆ. ಆದರೆ, ಜರ್ನಲಿಸ್ಟ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ವಿರಳವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭದ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಮಾತನಾಡಿ, ಆಧುನಿಕ ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವುದರ ಬಗ್ಗೆ ವಿಸ್ತೃತವಾಗಿ ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಮಾತನಾಡಿ, ಮಹಿಳೆಯರ ಸಮಸ್ಯೆಗಳು ಅನಾವರಣಗೊಳ್ಳಬೇಕಾದರೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪತ್ರಿಕಾರಂಗಕ್ಕೆ ಬರಬೇಕು ಎಂದು ಕೋರಿದರು.
ನಾಗನೂರ ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸರ್ಕಾರದ ನೆರವು ಇಲ್ಲದೇ ಗ್ರಾಮೀಣ ಭಾಗದ ಪತ್ರಕರ್ತರಿಗೆ ವಿಮೆ ಸೌಲಭ್ಯ ಒದಗಿಸುತ್ತಿರುವ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯವಾಗಿದೆ. ತೆರೆಮರೆಯಲ್ಲಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರನ್ನು ಗುರ್ತಿಸಿ ಅವರನ್ನು ಸತ್ಕರಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಪತ್ರಕರ್ತರ ಸಂಘದ ಕಾನೂನು ಸಲಹೆಗಾರ ಬಸವರಾಜ ರೊಟ್ಟಿ, ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಿರೋಜಿ ಮಾವರಕರ ಹಾಗೂ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ (ರಿ) ಟ್ರಸ್ಟ್‌ನ ಕಾರ್ಯದರ್ಶಿ ವಸಂತ ಹೊಸಮನಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಹಿರಿಯ ವರದಿಗಾರರಿಗೆ ವಿವಿಧ ಪತ್ರಿಕೆಯ ಹೆಸರಿನಲ್ಲಿ ಪ್ರಶಸ್ತಿ ಫಲಕ ನೀಡಿ ಪತ್ರಕರ್ತ ದಂಪತಿಗೆ ಸತ್ಕರಿಸಿ ಸನ್ಮಾನಿಸಲಾಯಿತು. ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಪತಕುಮಾರ ಮುಚಳಂಬಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಧಾನ ಉಪಸಂಪಾದಕ ಸದಾನಂದ ಮಜತಿ ಸ್ವಾಗತಿಸಿದರು. ಹಿರಿಯ ಉಪಸಂಪಾದಕ ಚನ್ನಬಸಪ್ಪ ರೊಟ್ಟಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ, ಸ್ವಾಗತಿಸಿದರು.
ಕನ್ನಡಪ್ರಭದ ಶ್ರೀಶೈಲ ಮಠದಗೆ ಹಸಿರು ಕ್ರಾಂತಿ ಪ್ರಶಸ್ತಿ ಪ್ರದಾನ

ಕನ್ನಡಪ್ರಭದ ಬೆಳಗಾವಿ ಜಿಲ್ಲೆಯ ಪ್ರಧಾನ ವರದಿಗಾರ ಶ್ರೀಶೈಲ ಮಠದಗೆ ದಿ.ಕಲ್ಯಾಣರಾವ ಮುಚಳಂಬಿ ಅವರ ಸ್ಮರಣಾರ್ಥ ನೀಡುವ ಹಸಿರು ಕ್ರಾಂತಿ ವಾರ್ಷಿಕ ಪ್ರಶಸ್ತಿ, ಸಂಯುಕ್ತ ಕರ್ನಾಟಕದ ಬೆಳಗಾವಿ ಜಿಲ್ಲೆಯ ಮುಖ್ಯ ವರದಿಗಾರ ವಿಲಾಸ್ ಜೋಶಿಗೆ ದಿ.ಬಿ.ಎನ್.ಧಾರವಾಡಕರ ಅವರ ಸ್ಮರಣಾರ್ಥ ನೀಡುವ ಸಮದರ್ಶಿ ವಾರ್ಷಿಕ ಪ್ರಶಸ್ತಿ, ನ್ಯೂಸ್ ಫಸ್ಟ್‌ನ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ಶ್ರೀಕಾಂತ್ ಕುಬಕಡ್ಡಿಗೆ ದಿ.ಶ್ರೀಮತಿ ಸಾವಿತ್ರಿ ಬಿ.ಶಿವಪೂಜಿ ಅವರ ಸ್ಮರಣಾರ್ಥ ನೀಡುವ ಗಡಿ ಕನ್ನಡಿಗ ವಾರ್ಷಿಕ ಪ್ರಶಸ್ತಿ, ತರುಣ ಭಾರತ ಪತ್ರಿಕೆಯ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ರಮೇಶ ಹಿರೇಮಠಗೆ ದಿ.ರಾಘವೇಂದ್ರ ಜೋಶಿ ಅವರ ಸ್ಮರಣಾರ್ಥ ನೀಡುವ ಎರಡನೇ ರಾಜಧಾನಿ ವಾರ್ಷಿಕ ಪ್ರಶಸ್ತಿ, ಬೆಳಗಾವಿ ವೇಣು ಧ್ವನಿ ರೇಡಿಯೋ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿಗೆ ದಿ.ಮಾಯಪ್ಪ ಬಿ.ಮಾವರಕರ ಅವರ ಸ್ಮರಣಾರ್ಥ ನೀಡುವ ಲೋಕ ವಾರ್ತೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.