ಮುದ್ದೇಬಿಹಾಳ: ಪುಸ್ತಕ ಸಂಸ್ಕೃತಿಯಿಂದ ಮಸ್ತಕವನ್ನು ಅರಳಿಸಬೇಕಾದ ಅವಶ್ಯಕತೆಯಿದೆ ಎಂದು ಕುಂಟೋಜಿ ಭಾವೈಕ್ಯತಾ ಹಿರೇಮಠದ ಡಾ. ಶ್ರೀ ಷ.ಬ್ರ ಗುರು ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಗೋನಾಳ ಪಿ.ಎನ್.ದಲ್ಲಿ ಶ್ರೀ ಪವಾಡ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಲಿಂ. ಚನ್ನಮಲ್ಲಪ್ಪ ಶರಣರ ನೂತನ ದೇವಸ್ಥಾನ ಮತ್ತು ಸಮುದಾಯ ಭವನ ಹಾಗೂ ಶರಣರ ಕುರಿತು ರಚಿತವಾದ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಶರಣರು ನುಡಿ ಒಂದು ಪರಿ , ನಡೆ ಒಂದು ಪರಿಯಾಗಿ ನಡೆಯಲಿಲ್ಲ. ನಡೆ ನುಡಿ ಒಂದಾಗಿ ನಡೆದುಕೊಂಡು ಬಂದವರು ಪರಪ್ಪ ಶರಣರು ಮತ್ತು ಚನ್ನಮಲ್ಲಪ್ಪ ಶರಣರು. ಅವರ ವ್ಯಕ್ತಿತ್ವ, ಅವರ ಬದುಕು ಭಕ್ತರೆಲ್ಲರಿಗೂ ದಾರಿದೀಪ. ಅವರ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಭಕ್ತರೆಲ್ಲರು ನಡೆದರೆ ಬದುಕು ಬಂಗಾರವಾಗುತ್ತದೆ. ಡಿಜಿಟಲ್ ಯುಗದ ಪ್ರಭಾವದಿಂದ ಪುಸ್ತಕ ಸಂಸ್ಕೃತಿ ಹೊರಟುಹೋಗಿ ಡಿಜಿಟಲ್ ಸಂಸ್ಕೃತಿ ಎಲ್ಲಾ ರಂಗದಲ್ಲೂ ಆಕ್ರಮಿಸಿಕೊಂಡಿದೆ. ಡಿಜಿಟಲ್ ಯುಗದಲ್ಲಿ ಪುಸ್ತಕ ಜ್ಞಾನದ ಅವಶ್ಯಕತೆ ಇರುತ್ತದೆ. ಸದ್ಗ್ರಂಥಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಲು ಸಲಹೆ ನೀಡಿದರು.
ಯಲಬುರ್ಗಾ ಹಿರೇಮಠ ಸಂಸ್ಥಾನದ ಶ್ರೀ ಷ.ಬ್ರ.ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತಾಡಿ ಶರಣರ ಬದುಕಿನಲ್ಲಿ ಸರಳತೆ ಮನೆಮಾತಾಗಿರುತ್ತದೆ. ಒಬ್ಬ ಸರಳ ಜೀವಿಯಾದ ಪರಪ್ಪ ಶರಣರು, ಚನ್ನಮಲ್ಲಪ್ಪ ಶರಣರು ಅವಿರತ ಸಾಧನೆ ಮಾಡಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿರುವುದು ಸಂತೋಷ ದಾಯಕ ವಿಷಯವಲ್ಲದೆ ಶರಣರ ಸಾಧನೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಜೈನಾಪೂರದ ಶ್ರೀ ಪವಾಡ ಬಸವೇಶ್ವರ ಸಿದ್ಧಲಿಂಗ ಮಹಾಸ್ವಮಿಗಳು, ನಿವೃತ್ತ ಉಪನ್ಯಾಸಕ ಬಿ. ಎಮ್.ಹಿರೇಮಠ, ಉಪನ್ಯಾಸಕ ಆಯ್.ಬಿ.ಹಿರೇಮಠ, ಭಾ.ಜ.ಪ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ್ ಕುಚಬಾಳ ಸೇರಿದಂತೆ ಶರಣರು ಸಾಗಿಸುಕೊಂಡು ಬಂದ ಬದುಕಿನ ಮೇಲೆ ಮಾತನಾಡಿದರು.
ಪ್ರಸ್ತುತ ವೇದಿಕೆಯಲ್ಲಿ ಡಾ. ಬೋರಮ್ಮ ಪೊಲೀಸಪಾಟಿಲ ರಚಿಸಿರುವ ಗೋನಾಳ ಘನಮಹಿಮ ಶರಣ ಪರಂಜ್ಯೋತಿಗಳು ಗ್ರಂಥದ ಬಿಡುಗಡೆ ನಡೆಯಿತು.
ಆಶ್ರಮದ ಧರ್ಮದರ್ಶಿ ಚನ್ನಮಲ್ಲಪ್ಪ ಕುಂಬಾರ ಶರಣರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಂಬಗಿ-ಮನ್ಯಾಳ ಪುಣ್ಯಾಶ್ರಮದ ಪ.ಪೂ ಶಂಕರಲಿಂಗ ಮಹಾರಾಜರು, ತಂಗಡಗಿ ಸಿದ್ಧಾರೂಢ ಮಠದ ಮಾಧಮಾನಂದ ಭಾರತೀ ಮಹಾಸ್ವಾಮಿಗಳು, ಮ್ಯಾಗೇರಿ ಅಡಿವೆಪ್ಪ ಶರಣರು, ಮನ್ಯಾಳ ಪುಣ್ಯಾಶ್ರಮದ ರಜಾಕ ಮುತ್ಯಾ, ಘಣ್ಯರುಗಳಾದ ಮಾಜಿ ಜಿ.ಪಂ ಅಧ್ಯಕ್ಷ ಪ್ರಭುಗೌಡ ಚ ದೇಸಾಯಿ, ಶಕುಂತಲಾ ಮಾಮನಿ, ಎಮ್.ಬಿ.ನಾವದಗಿ, ಡಾ ಬೋರಮ್ಮ ಪೊಲೀಸಪಾಟೀಲ, ಸತೀಶ ಓಸ್ವಾಲ್ ,ಬಸವರಾಜ ಮೋಟಗಿ, ಬಾಬುಗೌಡ ಪಾಟೀಲ್, ಎಮ್.ಜಿ.ಮೋಟಗಿ, ವೀರಣ್ಣ ತಡಸದ, ಶ್ರೀಶೈಲ ಸೂಳಿಭಾವಿ, ಸಂಗಮೇಶ ಕುಂಬಾರ, ಬಸವರಾಜ ಕುಂಬಾರ, ವಾಯ್.ಎಚ್.ವಿಜಯಕರ, ಸಂಗಮೇಶ ವಿಜಯಕರ, ಎನ್.ಎಮ್.ಕುಂಬಾರ ಸೇರಿದಂತೆ ಇತರರು ಹಾಜರಿದ್ದರು.
ಸಂಗಮೇಶ ಶಿವಣಗಿ ಹಾಗೂ ಸಂಗಡಿಗರು ಸೇರಿ ಪ್ರಾರ್ಥಿಸಿದರು. ಎಮ್.ಡಿ.ಕುಂಬಾರ ವಕೀಲರು ಸ್ವಾತಿಸಿದರು. ಬಿ.ಆರ್.ಬೆಳ್ಳಿಕಟ್ಟಿ ಮತ್ತು ಮಂಜುನಾಥ ಮದರಿ ಸೇರಿ ನಿರೂಪಿಸಿದರು. ರಾಮಚಂದ್ರ ಹೆಗಡೆ ಕಡ್ಲೆ ವಂದಿಸಿದರು.