ಮುದ್ದೇಬಿಹಾಳ ,23 : ಜಾತಿ, ಪಂಗಡಗಳ ಎಲ್ಲೆಗಳನ್ನು ಮೀರಿ ಮಾನವೀಯತೆ, ಪ್ರೀತಿ, ತ್ಯಾಗ ಹಾಗೂ ಸಮಾನತೆಯ ಮೌಲ್ಯಗಳನ್ನು ಸಾರಿದ ಪ್ರವಾದಿ ಮಹಮ್ಮದ್ ಅವರ ಸಂದೇಶಗಳು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಕ್ತ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್ ಸೀರತ್ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರವಾದಿ ಮಹಮ್ಮದ್ ಅವರ ಸಂದೇಶ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಸಮಾಜದಲ್ಲಿನ ಅಸಮಾನತೆ, ಬಡತನ ಹಾಗೂ ಶೋಷಣೆಯ ವಿರುದ್ಧ ಧ್ವನಿ ಎತ್ತಿ, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಬದುಕಿನ ಮಾರ್ಗವನ್ನುಅವರು ತೋರಿಸಿಕೊಟ್ಟಿದ್ದಾರೆ ಎಂದರು.
ನಾವೆಲ್ಲರೂ ಒಬ್ಬನೇ ದೇವನ ಸೃಷ್ಟಿಯಾಗಿದ್ದು, ಒಬ್ಬ ತಂದೆತಾಯಿಯ ಮಕ್ಕಳು ಒಂದು ದೇಶದ ವಾಸಿಗಳು ನಾವು ಎಲ್ಲರೂ ಭಾರತೀಯರು ಎಂದರು .
ಧರ್ಮವು ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ. ಉತ್ತಮ ಗುಣಗಳನ್ನು ಹೊಂದಿರುವ ವ್ಯಕ್ತಿಗೆ ಜಾತಿ-ಪಂಗಡಗಳ ಎಲ್ಲೆ ಇರುವುದಿಲ್ಲ. ಮನುಷ್ಯರನ್ನು ಮನುಷ್ಯರೊಂದಿಗೆ ಜೋಡಿಸುವ ಕೆಲಸವನ್ನು ಪ್ರವಾದಿ ಮಹಮ್ಮದ್ ಮಾಡಿದರು ಎಂದರು.
ಮನುಷ್ಯನ ಜೀವನ ಒಂದು ಪರೀಕ್ಷೆಯಾಗಿದೆ, ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣಬೇಕು. ಮನುಷ್ಯನ ಹುಟ್ಟು ಈ ಮಣ್ಣಿನಿಂದಲೇ ಆಗಿದೆ. ಆದ್ದರಿಂದ ಜಾತಿ, ಧರ್ಮದ ಆಧಾರದ ಮೇಲೆ ಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಅಂದರು. ಎಲ್ಲ ಧರ್ಮಗಳ ಸಾರವೂ ಅಂತಿಮವಾಗಿ ಮಾನವೀಯತೆ, ಪ್ರೀತಿ, ಶಾಂತಿ ಹಾಗೂ ಸಹಬಾಳ್ವೆಯನ್ನೇ ಸಾರುತ್ತದೆ ಎಂದು ಅವರು ಹೇಳಿದರು.
ಓಂ ಶಾಂತಿ ರೇಣುಕಾ ಅಕ್ಕ ಮಾತನಾಡಿ, ಪ್ರವಾದಿ ಮಹಮ್ಮದ್ ಅವರು ಜಾತಿ-ಧರ್ಮದ ಭೇದಗಳನ್ನು ಮೀರಿ ಪ್ರೀತಿ, ತ್ಯಾಗ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪರಿವರ್ತನೆ ತಂದುಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಬೆಳೆಸುವ ನಿಟ್ಟಿನಲ್ಲಿ ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಫಾದರ್ ಸುನಿಲ್ ಮಾತನಾಡಿ, ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಸರ್ವಧರ್ಮ ಸಮನ್ವಯದ ಆಶಯವನ್ನು ಅರ್ಥಮಾಡಿಕೊಂಡು ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ ಹಾಗೂ ಸಹೋದರತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರೋಫೆಸರ್ ಆರ್ ಎಚ್ ಸಜ್ಜನ್ ಸರ್ ಮಾತನಾಡಿ ಇಸ್ಲಾಮಿನ ಐದು ಅರಾಧನ ಕರ್ಮಗಳಾದ ವಿಶ್ವಾಸ,ನಮಾಝ್,ಉಪವಾಸ,ಝಕಾತ್, ಹಜ್ಜ್ ಗಳಲ್ಲಿ ಮಾನವೀಯ ಮೌಲ್ಯಗಳು ಹೇಗೆ ಅಡಕ ವಾಗಿವೆ ಎಂಬುದನ್ನು ವಿವರಿಸಿದರು.
ಮುದ್ದೇಬಿಹಾಳ ಘಟಕದ ನೂರ ನಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರವಾದಿ ಮಹಮ್ಮದ್ ಅವರು ಅಸಮಾನತೆಯ ವಿರುದ್ಧ ಹೋರಾಡಿ, ಬಡವರು ಹಾಗೂ ಗುಲಾಮರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಹಸಿವಿನ ನೋವು ಮತ್ತು ಮಹತ್ವವನ್ನು ಅರಿತಿದ್ದ ಅವರು, ಸಂಕಷ್ಟದಲ್ಲಿರುವವರ ಬದುಕನ್ನು ಅರ್ಥಮಾಡಿಕೊಳ್ಳುವಂತೆ ಸಮಾಜಕ್ಕೆ ಸಂದೇಶ ನೀಡಿದರು. ಸಂಕುಚಿತ ಮನೋಭಾವವನ್ನು ತೊರೆದು, ‘ನನ್ನ ಜೊತೆಗೆ ಇತರರೂ ಬದುಕಬೇಕು’ ಎಂಬ ಮಾನವೀಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಸಂಚಾಲಕರಾದ ನಾಸಿರ್ ಹುಸೇನ್ ಮಾತನಾಡಿ
ಪ್ರವಾದಿ ಮುಹಮ್ಮದರು ಮಾನವೀಯ ಮೌಲ್ಯಗಳನ್ನು ಜಾರಿಗೆ ತಂದ ಮಹಾನ್ ಕ್ರಾಂತಿಕಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು, ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾವಿರಾರು ಪುರುಷರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.