ಯರಗಟ್ಟಿ: ಶೈಕ್ಷಣಿಕವಾಗಿ ಹಿಂದುಳಿದಿರುವ ಬಣಜಿಗ ಸಮಾಜದವರಿಗೆ ಶಿಕ್ಷಣ ಹಾಗೂ ಉದ್ಯೋಗ ಎರಡರಲ್ಲೂ ೨ಎ (ಗ್ರೂಪ್-ಬಿ) ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಎಮ್. ವ್ಹಿ. ಗುಂಡಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
ಯರಗಟ್ಟಿ ತಾಲೂಕಾ ಬಣಜಿಗ ಸಮುದಾಯದ ಮುಖಂಡ ಮಹಾಂತೇಶ ಗೋಡಿ ಮಾತನಾಡಿದ ಅವರು ಪ್ರಕರಣದಲ್ಲಿ ನ್ಯಾಯಮೂರ್ತಿ ಸುರಜ್ ಗೋವಿಂದರಾಜ ಅವರ ಏಕಸದಸ್ಯ ಪೀಠವು ಬಣಜಿಗ ಸಮಾಜವನ್ನು ಶಿಕ್ಷಣದಲ್ಲಿ ಗ್ರೂಪ್-ಬಿ ಹಾಗೂ ಉದ್ಯೋಗದಲ್ಲಿ ಗ್ರೂಪ್-ಡಿ ಎಂದು ವರ್ಗೀಕರಿಸಿರುವುದು ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು. ಬಣಜಿಗ ಸಮಾಜ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದೆ. ಪ್ರಸ್ತುತ ಶಿಕ್ಷಣದಲ್ಲಿ ೨ಎ (ಗ್ರೂಪ್-ಬಿ) ಹಾಗೂ ಉದ್ಯೋಗದಲ್ಲಿ ೩ಎ (ಗ್ರೂಪ್-ಡಿ) ಮೀಸಲಾತಿ ಇರುವುದರಿಂದ ಶಿಕ್ಷಣ ಪಡೆದ ಅನೇಕ ಯುವಕರಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ ಎಂದು ಅವರು ತಿಳಿಸಿದರು.
ಹೀಗಾಗಿ ಬಣಜಿಗ ಸಮಾಜದ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಎರಡರಲ್ಲೂ ೨ಎ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ತಾಲ್ಲೂಕಿನ ಸಮಾಜದ ಮುಖಂಡ ಮಹಾಂತೇಶ ಜಕಾತಿ, ರಾಜೇಂದ್ರ ವಾಲಿ, ಪಂಚಾಕ್ಷರಿ ಪಟ್ಟಣಶೆಟ್ಟಿ, ಮಹಾಂತೇಶ ಕಾಶನ್ನವರ, ಶಿವಾನಂದ ಪಟ್ಟಣಶೆಟ್ಟಿ, ಸುನೀಲ ಬೆಲ್ಲದ, ಶಿವಾನಂದ ಯರಗಣವಿ, ತಮ್ಮಣ್ಣ ವಾಲಿ, ಶ್ರೀಶೈಲ ವಾಲಿ, ಸುರೇಶ ತಲ್ಲೂರು, ಬಸವರಾಜ ವಾಲಿ, ಸಿದ್ಲಿಂಗಪ್ಪ ಗಲಗಲಿ, ಪ್ರಕಾಶ ಹೊಸಕೋಟಿ, ಈರಣ್ಣ ಉಪ್ಪಿನ, ಬಾಬು ಪಟ್ಟೇದ, ಸಂತೋಷ ವಾಲಿ, ಬಸವರಾಜ ಹಸಬಿ, ಪ್ರವೀಣ ಬೆಣ್ಣೆ ಇತರರಿದ್ದರು.