Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಲ್ಲಿ ಪರ್ಯಾಯ ಬೆಳೆ ಬೆಳೆಯಲು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

“ಪರ್ಯಾಯ ಬೆಳೆ ಯೋಜನೆ & ರಸಗೊಬ್ಬರ ಕೊರತೆ ನಿವಾರಣೆಗೆ ಪರ್ಯಾಯ ಗೊಬ್ಬರಗಳು” ವಿಷಯದ ಕುರಿತು ಕಾರ್ಯಾಗಾರ

 




ಕೊಪ್ಪಳ ಜುಲೈ 23: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಕಚೇರಿಗಳಿಗೆ ಸೀಮಿತವಾಗದೆ ಕ್ಷೇತ್ರ ಭೇಟಿ ನೀಡಿ, ರೈತರಲ್ಲಿ ಪರ್ಯಾಯ ಬೆಳೆ ಬೆಳೆಯುವ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸೂಚಿಸಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಜಿಲ್ಲಾ ಕೃಷಿಕ ಸಮಾಜ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಜು. 22ರಂದು) ಜಿಲ್ಲಾ ಪಂಚಾಯತ್ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಪರ್ಯಾಯ ಬೆಳೆ ಯೋಜನೆ ಮತ್ತು ರಸಗೊಬ್ಬರ ಕೊರತೆ ನಿವಾರಣೆಗೆ ಪರ್ಯಾಯ ಗೊಬ್ಬರಗಳು” ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ವರ್ಷ 2,48,000 ಹೆಕ್ಟೇರ್ ಬಿತ್ತನೆಯಾಗಬೇಕಿತ್ತು. ಆದರೆ ಮಳೆ ಅಭಾವದಿಂದಾಗಿ ಪ್ರಸ್ತುತ ಶೇ. 49 ರಷ್ಟು ಅಂದರೆ ಕೇವಲ 1,64,000 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ತುಂಗಭದ್ರಾ ಜಲಾಶಯದಿಂದ ನೀರಾವರಿ ಸೌಲಭ್ಯ ಸೀಮಿತವಾಗಿದ್ದು, ಕಳೆದ ವರ್ಷ 80 ಟಿಎಂಸಿ ನೀರಿದ್ದರೆ, ಈ ವರ್ಷ ಕೇವಲ 26 ಟಿಎಂಸಿ ಲಭ್ಯವಿದೆ. ರೈತರು ಹೆಚ್ಚಿನ ನೀರು ಬೇಡುವ ಬೆಳೆಗಳ ಬದಲಾಗಿ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ತಜ್ಞರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಫಸಲ್ ಭೀಮಾ ಯೋಜನೆಯಡಿ, ಜುಲೈ 15ರ ನಂತರ ವಿಮೆ ನೋಂದಣಿಯನ್ನು ಚುರುಕುಗೊಳಿಸಲಾಗಿದ್ದು, ಪ್ರಸ್ತುತ 65,000 ರೈತರು ನೋಂದಾಯಿಸಿಕೊAಡಿದ್ದಾರೆ. ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ರೈತರಿದ್ದು, ಬಿತ್ತನೆ ತಡೆಯಲ್ಪಟ್ಟ ಪ್ರದೇಶಗಳಲ್ಲೂ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕಿದೆ ಎಂದರು.
ಜೂನ್‌ನಲ್ಲಿ ಶೇ. 30 ಹಾಗೂ ಜುಲೈನಲ್ಲಿ ಶೇ. 34 ರಷ್ಟು ಮಳೆ ಕೊರತೆಯಾಗಿದ್ದು, ಒಟ್ಟಾರೆಯಾಗಿ ಶೇ. 32 ರಷ್ಟು ಮಳೆಯ ಅಭಾವ ಉಂಟಾಗಿದೆ. ಗಂಗಾವತಿ ಸೇರಿದಂತೆ ಜಿಲ್ಲೆಯ 20 ಹೋಬಳಿಗಳ ಪೈಕಿ 5 ಹೋಬಳಿಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಇದರಿಂದಾಗಿ ನಿರೀಕ್ಷಿತ ಬಿತ್ತನೆ ಸಾಧ್ಯವಾಗಿಲ್ಲ. ಮಳೆ ಅಭಾವದಿಂದಾಗಿ ಸದ್ಯ ಬಿತ್ತನೆಯಾಗಿರುವ ಮೆಕ್ಕೆಜೋಳ, ತೊಗರಿ ಮುಂತಾದ ಬೆಳೆಗಳು ಸರಿಯಾದ ಪ್ರಮಾಣದಲ್ಲಿ ಬೆಳೆದಿಲ್ಲ. ಬೆಳೆಗಳು ಸೂಕ್ತ ಬೆಳವಣಿಗೆ ಕಾಣದೆ ಮೊಣಕಾಲಿಗಿಂತ ಕೆಳಗಿನ ಮಟ್ಟದಲ್ಲೇ ನಿಂತಿವೆ. ಇವುಗಳಲ್ಲಿ ಹೆಚ್ಚಿನ ಭಾಗ ಕೇವಲ ಮೇವಿಗಷ್ಟೇ ಬಳಕೆಯಾಗುವ ಸ್ಥಿತಿಯಲ್ಲಿದ್ದು, ತೆನೆ ಅಥವಾ ಕಾಳು ಕಟ್ಟುವ ಹಂತಕ್ಕೆ ತಲುಪಿಲ್ಲ. ಇನ್ನೂ ಕೆಲವು ಬೆಳೆಯನ್ನು ಮೇವಾಗಿ ಬಳಕೆ ಮಾಡುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರು ನೀಡಿರುವ ನಿರ್ದೇಶನದಂತೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಮತ್ತು ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ತಂಡವಾಗಿ ಕ್ಷೇತ್ರ ಭೇಟಿಯನ್ನು ಕೈಗೊಂಡು ರೈತರಿಗೆ ಜಾಗೃತಿ ಹಾಗೂ ಅಗತ್ಯ ನೆರವು ನೀಡಬೇಕು. ಈ ಬಗ್ಗೆ ಕೃಷಿ ಮತ್ತು ಪಶು ಸಖಿಯರ ಪಾತ್ರವು ಮುಖ್ಯವಾಗಿದೆ ಎಂದರು.
ರೈತರು ಬೆಳೆ ವಿಮೆ ಮಾಡಿಸಲು ವೇಗ ಹೆಚ್ಚಿಸಲಾಗಿದ್ದು, ಲೋನಿ (ಸಾಲ ಪಡೆದ) ಮತ್ತು ನಾನ್-ಲೋನಿ ರೈತರೆಲ್ಲರೂ ಇದರ ಸೌಲಭ್ಯ ಪಡೆಯಬೇಕು. ಜೊತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಚಟುವಟಿಕೆಗಳಿಗೆ ಹೆಚ್ಚಿನ ಸಾಲ ಸೌಲಭ್ಯ ದೊರಕಿಸಲು ಕ್ರಮವಹಿಸಲಾಗುತ್ತಿದೆ. ಪ್ರಧಾನಮಂತ್ರಿ ವಿಕಸಿತ ಭಾರತ- ಜಿಲ್ಲೆ ಯೋಜನೆಯಡಿ ಜಲಾನಯನ ಅಭಿವೃದ್ಧಿ, ಹಸಿರು ಹೊದಿಕೆ ಹಾಗೂ ಕೊಳವೆಬಾವಿ ಮರುಪೂರಣ ಕಾರ್ಯಗಳಿಗೆ ಸಿಎಸ್‌ಆರ್ ನಿಧಿ ಬಳಸಿಕೊಳ್ಳಲು ಸುಮಾರು 100 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ಗೆ ಕೆಕೆಆರ್‌ಡಿಬಿಯಿಂದ 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದ್ದು, ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಳೆಯ ಅಭಾವದ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ಕಲ್ಪಿಸಲು `ಮಿಡ್ ಸೀಸನ್ ಅಡ್ವರ್ಸಿಟಿ' ನಿಯಮಾವಳಿಯನ್ನು ಜಾರಿಗೆ ತರಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪನೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಬರಲಿದೆ. ರೈತರಿಗೆ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಂಶೋಧನೆಗಳು ಮತ್ತು ತಂತ್ರಜ್ಞಾನ ನೇರವಾಗಿ ತಲುಪುವಂತೆ "ಲ್ಯಾಬ್ ಟು ಲ್ಯಾಂಡ್" ನಿರಂತರ ತರಬೇತಿ ಹಾಗೂ ಮಾಹಿತಿ ವಿನಿಮಯ ನಡೆಯಬೇಕೆಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಕೃಷಿ ತಂತ್ರಜ್ಞರ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ. ಎ.ಬಿ. ಪಾಟೀಲ್ ಅವರು ಮಾತನಾಡಿ, ರಾಸಾಯನಿಕ ಗೊಬ್ಬರಗಳ ಅಭಾವ ಮತ್ತು ಹವಾಮಾನ ವೈಪರೀತ್ಯದಂತಹ ಸವಾಲುಗಳನ್ನು ಎದುರಿಸಲು ರೈತರು ಪರ್ಯಾಯ ಬೆಳೆ ಯೋಜನೆ ಹಾಗೂ ಪರ್ಯಾಯ ಗೊಬ್ಬರಗಳ ಬಳಕೆಗೆ ಮುಂದಾಗಬೇಕು. ಕೃಷಿ ತಂತ್ರಜ್ಞರ ಸಂಸ್ಥೆಯು "1968ರಲ್ಲಿ ಆರಂಭಗೊAಡಿದ್ದು, ಇಂದು ರಾಜ್ಯಾದ್ಯಂತ 6,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಹಾಗೂ ಸಂಬAಧಿತ ಕ್ಷೇತ್ರದ ತಜ್ಞರನ್ನು ಒಳಗೊಂಡಿರುವ ಏಕೈಕ ಸಂಸ್ಥೆ ಇದಾಗಿದೆ. ಮಂಗಳೂರು, ಶಿವಮೊಗ್ಗ ಹಾಗೂ ಬಾಗಲಕೋಟೆ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ರೈತರಿಗೆ ಜ್ಞಾನ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದರು.
ಕೊಪ್ಪಳ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದ ಪ್ರಗತಿಯನ್ನು ಶ್ಲಾಘಿಸಿದ ಅವರು, "ಒಂದು ಕಾಲದಲ್ಲಿ ವಿದೇಶಿ ತಳಿಗಳ ಹಣ್ಣುಗಳನ್ನು ನೋಡಲು ಥೈಲ್ಯಾಂಡ್, ಜಪಾನ್ ಅಥವಾ ಮಲೇಷಿಯಾಕ್ಕೆ ಹೋಗಬೇಕಿತ್ತು. ಆದರೆ ಇಂದು ಕೊಪ್ಪಳ ಜಿಲ್ಲೆಯಲ್ಲೇ ಅಂತಹ ಅದ್ಭುತ ವಿದೇಶಿ ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 50,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿರುವುದು ಶ್ಲಾಘನೀಯ ಸಾಧನೆ. ದಾಳಿಂಬೆ, ಮಾವು ಹಾಗೂ ಅಂಗಾAಶ ಕೃಷಿ ಮೂಲಕ ಏಲಕ್ಕಿ ಬಾಳೆ ಬೆಳೆದು ರೈತರು ಆರ್ಥಿಕವಾಗಿ ಸಮೃದ್ಧಿ ಕಾಣುತ್ತಿದ್ದಾರೆ. ಜಿಲ್ಲೆಯ ಕೇಸರ ಮಾವು ಮತ್ತು ಇತರೆ ಬೆಳೆಗಳಿಗೆ ಸಂಬAಧಿಸಿದAತೆ ಜಿಐ ಟ್ಯಾಗ್ ಮಾಡಬೇಕು. ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ಮತ್ತು ರೈತರ ಸರ್ವತೋಮುಖ ಪ್ರಗತಿಗೆ ಸಿಎಸ್‌ಆರ್ ಹಾಗೂ `ಕೆಇಜಿಎಮ್' ನಂತಹ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ ಅವರು ಮಾತನಾಡಿ, ಬರಗಾಲದ ಭೀತಿ ಆವರಿಸುತ್ತಿರುವ ಈ ಕಠಿಣ ಸಮಯದಲ್ಲಿ ರೈತರ ಹಿತರಕ್ಷಣೆಗಾಗಿ ಕೃಷಿ ಇಲಾಖೆ, ಕೃಷಿಕ ಸಮಾಜ ಹಾಗೂ ವಿವಿಧ ಸಂಶೋಧನಾ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡುವ ಅಗತ್ಯವಿದೆ. ಪ್ರಸ್ತುತ ಬಿತ್ತನೆ ಮಾಡಲಾದ ಬೆಳೆಗಳು ಒಣಗುತ್ತಿದ್ದು, ಮುಂಬರುವ ದಿನಗಳಲ್ಲಿ ಮಳೆಯಾದರೂ ಅವುಗಳಿಂದ ನಿರೀಕ್ಷಿತ ಫಸಲು ಸಿಗುವುದು ಕಷ್ಟಕರವಾಗಿದೆ. ಆದ್ದರಿಂದ ರೈತರಿಗೆ ಪರ್ಯಾಯ ಬೆಳೆಗಳನ್ನು ಪರಿಚಯಿಸಿ, ಅವುಗಳನ್ನು ಬೆಳೆಯಲು ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ. ಪ್ರತಿ ತಾಲೂಕಿನಲ್ಲೂ ರೈತರಿಗೆ ಉಪಯುಕ್ತವಾಗುವ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸೇರಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯು ದೇಶದಲ್ಲೇ ಅತಿ ಹೆಚ್ಚು ತೋಟಗಾರಿಕೆ ಬೆಳೆ ಬೆಳೆಯುವ ಹೆಗ್ಗಳಿಕೆ ಹೊಂದಿದೆ. ಆದ್ದರಿಂದ ಕೃಷಿ ಇಲಾಖೆ, ವಿಜ್ಞಾನಿಗಳು, ತೋಟಗಾರಿಕೆ ಕಾಲೇಜು ಹಾಗೂ ಸಹೋದರ ಸಂಸ್ಥೆಗಳು ಒಟ್ಟಾಗಿ ತಂಡವಾಗಿ ಕೆಲಸ ಮಾಡಿ ರೈತರ ಏಳಿಗೆಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ. ಕೃಷ್ಣಮೂರ್ತಿ ಅವರು ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಸರು, ಭತ್ತ(ನೀರಾವರಿ), ಮೆಕ್ಕೆಜೋಳ ಮತ್ತು ಸಜ್ಜೆ ಈ ನಾಲ್ಕು ಬೆಳೆಗಳು ಒಳಪಡುತ್ತವೆ. ಪಂಚಾಯತಿ ವ್ಯಾಪ್ತಿಯಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಭಾಗದಲ್ಲಿ ಬಿತ್ತನೆಯಾಗದಿದ್ದರೆ ಅಥವಾ ಬಿತ್ತನೆ ಮಾಡಿದ ನಂತರ ಮೊಳಕೆಯ ಹಂತದಲ್ಲೇ ಬೆಳೆ ನಶಿಸಿಹೋಗಿದ್ದರೆ, ಅಂತಹ ಸಂದರ್ಭದಲ್ಲಿ ರೈತರಿಗೆ ಬೆಳೆ ನಷ್ಟದ ಒಟ್ಟು ವಿಮಾ ಮೊತ್ತದ ಶೇಕಡಾ 25 ರಷ್ಟು ಭಾಗವನ್ನು ಮುಂಚಿತವಾಗಿಯೇ ಪರಿಹಾರವಾಗಿ ನೀಡಿ, ಆ ವಿಮಾ ಪಾಲಿಸಿಯನ್ನು ಕ್ಲೋಸ್ ಮಾಡಲಾಗುತ್ತದೆ. ಬೆಳೆ ಬೆಳೆದ ನಂತರ ಶೇಕಡಾ 50 ಕ್ಕಿಂತ ಹೆಚ್ಚು ಇಳುವರಿ ನಷ್ಟ ಸಂಭವಿಸಿದರೆ, ಕೃಷಿ ಇಲಾಖೆ ಮತ್ತು ಇನ್ಸುರೆನ್ಸ್ ಕಂಪನಿಯ ಅಧಿಕಾರಿಗಳು ಜಂಟಿಯಾಗಿ ಕ್ಷೇತ್ರ ಪರಿಶೀಲನೆ ನಡೆಸಲಿದ್ದಾರೆ. ನಷ್ಟದ ತೀವ್ರತೆಗೆ ಅನುಗುಣವಾಗಿ ಮೊದಲ ಹಂತದಲ್ಲಿ ಶೇಕಡಾ 25 ರಷ್ಟು ಮುಂಗಡ ಮೊತ್ತವನ್ನು ನೀಡಿ, ನಂತರ ಬೆಳೆ ಕೊಯ್ಲು (ಕಟಾವು) ಪೂರ್ಣಗೊಂಡ ಮೇಲೆ ಬಾಕಿ ವಿಮಾ ಮೊತ್ತವನ್ನು ಇನ್ಸುರೆನ್ಸ್ ಕಂಪನಿಯಿAದ ವಿತರಿಸಲಾಗುವುದು. ಸರ್ಕಾರದಿಂದ ಬರ ಪರಿಹಾರ ಪ್ರಕಟಿಸುವಾಗ ಬೆಳೆಗಳ ನಿಖರ ಮಾಹಿತಿ ಅತ್ಯಗತ್ಯವಾಗಿರುತ್ತದೆ. ಅದಕ್ಕಾಗಿ ರೈತರು 'ಬೆಳೆ ದರ್ಶಕ' ಆ್ಯಪ್ ಬಳಸಿ ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರಗಳನ್ನು ತಪ್ಪದೇ ನಮೂದಿಸಬೇಕು. ಬೆಳೆ ಬದಲಾವಣೆ ಮಾಡಿರುವ ರೈತರು ಅಥವಾ ಆ್ಯಪ್ ಬಳಕೆಯ ಮಾಹಿತಿ ಇಲ್ಲದವರು, ಸ್ಥಳೀಯ ಯುವಕರು ಅಥವಾ ಕೃಷಿ ಇಲಾಖೆ ಸಿಬ್ಬಂದಿಯ ನೆರವು ಪಡೆದು ಬೆಳೆ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಈ ಬಗ್ಗೆ ಕೃಷಿ ಮತ್ತು ಪಶು ಸಖಿಯರು ರೈತರಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಬಸವಣ್ಣೆಪ್ಪ, ಕೊಪ್ಪಳ ತೋಟಗಾರಿಕಾ ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮುಖ್ಯಸ್ಥರಾದ ಡಾ. ಭದ್ರಿಪ್ರಸಾದ ಪಿ ಆರ್., ಆಯೋಧ್ಯ ಕ್ರಾಪ ಅಕಾಡೆಮಿ ಅಧ್ಯಕ್ಷರಾದ ಡಾ. ಎಂ.ಬಿ.ಪಾಟೀಲ್, ಮಾನ್ವಿಯ ಪಕ್ಷಿ ಪ್ರೇಮಿ ಸಲಾಹುದ್ದೀನ ಮಾನ್ವಿ, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರಾದ ಡಾ. ಪಿ.ಎಂ. ಮಲ್ಲಯ್ಯ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶ್ರೀನಿವಾಸ ಮತ್ತು ರೇಷ್ಮೆ ಇಲಾಖೆ ಉಪ ನಿರ್ದೇಶಕರಾದ ಸತೀಶ್ ಅವರು ತಾಂತ್ರಿಕ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಿವಣ್ಣ ಮೂಲಿಮನಿ, ಮುನಿರಾಬಾದ್ ತೋಟಗಾರಿಕೆ ಮಾಹಾವಿದ್ಯಾಲಯದ ನಿರ್ದೇಶಕರಾದ ಡಾ. ಪ್ರಭುಲಿಂಗ ಜಿ., ಕೊಪ್ಪಳ ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷರಾದ ವೀರಣ್ಣ ಕಮತರ, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ವೆಂಕಪ್ಪ, ಗಂಗಾವತಿ ಕೆವಿಕೆ ಮುಖ್ಯಸ್ಥರಾದ ರಾಘವೇಂದ್ರ ಎಲಿಗಾರ ಸೇರಿದಂತೆ ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಮೀನುಗಾರಿಕೆ ಇಲಾಖೆಯ ತಾಲ್ಲೂಕು ಅಧಿಕಾರಿಗಳು, ರೈತ ಮುಖಂಡರು, ಕೃಷಿ ಮತ್ತು ಪಶು ಸಖಿಯರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಖಾಸ್ಗತನ ಮಿರ್ಚಿಬಜಿ-ಪಲಾವ್ ಪ್ರಸಾದ ಸವಿದ ಸದ್ಭಕ್ತರು"ರಾಷ್ಟ್ರಧ್ವಜವು ನಾಗರಿಕರ ದೇಶಭಕ್ತಿಯನ್ನು ಬಲಪಡಿಸುತ್ತದೆ"ಮಂದಿರ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ವೇಗ: ಗ್ರಾಮಸ್ಥರೊಂದಿಗೆ ಚರ್ಚಿಸಿದ ಚನ್ನರಾಜ ಹಟ್ಟಿಹೊಳಿ ದಕ ಮಾದರಿಯಲ್ಲಿ ಉಕ ದೇವಾಲಯಗಳ ಅಭಿವೃದ್ಧಿಪಡಿಸಿಶ್ರೀ ಸತ್ಯ ಸಾಯಿ ಬಾಲ ವಿಕಾಸ ತರಗತಿಗಳನ್ನು ಬೋಧಿಸಲು ಮನವಿಮಲೇರಿಯಾ, ಡೆಂಘೀ ಪ್ರಕರಣಗಳಿಗೆ ಅಗತ್ಯ ಕ್ರಮಕೈಗೊಳ್ಳಿವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ : ಆಕಾಶ ನಂದಗಾಂವನಾಳೆ ಸುರೇಬಾನ-ಮನಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಸಾಂಸ್ಕೃತಿಕ ಕ್ರೀಡೆ, ಇ ಎಲ್ ಸಿ. ರೇಂಜರ್ ಮತ್ತು ರೋವರ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭರೈತರಲ್ಲಿ ಪರ್ಯಾಯ ಬೆಳೆ ಬೆಳೆಯಲು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳದೆಹಲಿ ಪೊಲೀಸರು ಪ್ರತಿಭಟನೆ ನಿರತ ವಿದ್ಯಾರ್ಥಿ ಗಳ ಮೇಲೆ   ಶಾಕ್ ಬಟನ್, ಪೆಲ್ಲೆಟ್ ಗನ್ ಬಳಸಿ ದೌರ್ಜನ್ಯ:   ಕ್ರಮ ವಿರುದ್ಧ ಹೊಸಪೇಟೆಯಲ್ಲಿ ಎಐಡಿಎಸ್‌ಒ ಆಕ್ರೋಶ*