ಬಾಗಲಕೋಟೆ : ಅಕ್ಟೋಬರ ೦೫ : ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಅರಣ್ಯ ಇಲಾಖೆಯಿಂದ ವನ್ಯಜೀವಿ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ೧೦ ಕಿ.ಮೀ ಮ್ಯಾರಥಾನ್ ಹಾಗೂ ೫ ಕಿ.ಮೀ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಕಡಿಮೆಯಾಗಿದ್ದು, ಪರಿಸರ ಸಮತೋಲನ ಕಾಪಾಡಲು ಹೆಚ್ಚಿನ ಗಿಡಗಳನ್ನು ನೆಟ್ಟು ಬೆಳೆಸುವ ಅಗತ್ಯವಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದರು.
ನಾನು ಸ್ವತಃ ನಮ್ಮ ಜಮೀನಿನಲ್ಲಿ ೧೦ ಸಾವಿರ ಗಿಡಗಳನ್ನು ನಟ್ಟಿದ್ದೇನೆ. ಚಿಕ್ಕಸಂಗಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಲಕ್ಷ ಗಿಡ ನೆಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳನ್ನು ವ್ಯಾಪಕವಾಗಿ ನಡೆಯಬೇಕು. ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವ ಪರಿಣಾಮ ನವ್ಯಜೀವಿಗಳಿಗೆ ನೈಸರ್ಗಿಕ ಆವಾಸಸ್ಥಾನಗಳ ಕೊರತೆ ಉಂಟಾಗುತ್ತಿವೆ. ಇದರಿಂದ ಹಿಂದೆ ಕಾಣಸಿಗುತ್ತಿದ್ದ ಹಲವು ವನ್ಯ ಪ್ರಾಣಿಗಳು ಈಗ ಅಪರೂಪವಾಗುತ್ತಿವೆ. ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು, ಸಂರಕ್ಷಿಸುವುದು ಅವಶ್ಯಕವಾಗಿದೆ ಎಂದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ ಮಾತನಾಡಿ, ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಗೆ ಸಾರ್ವಜನಿಕರು ಕೈಜೋಡಿಸಬೇಕು. ಪ್ರಕೃತಿ ಸಂಪತ್ತಿನ ಸಂರಕ್ಷಣೆಗೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಚತ್ ಸದಸ್ಯ ಪಿ.ಹೆಚ್.ಪೂಜಾರ ಅವರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವನ್ಯಜೀವಿಗಳ ಬೇಟೆ ಹಾಗೂ ಅರಣ್ಯ ಒತ್ತುವರಿಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅನೀಲಕುಮಾರ ದಡ್ಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣಾಡಿ, ಎಂ.ಆರ್.ದೇಸಾಯಿ, ಲಿಂಗೋಜಿರಾವ್ ಕುಲಕರ್ಣಿ, ಪ್ರದೀಪ್ ರಾಥೋಡ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಮ್ಯಾರಥಾನ್ ಹಾಗೂ ವಾಕಥಾನ್‌ದಲ್ಲಿ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಮುಕ್ತಾಯಗೊಂಡಿತು. ೩೫೦ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
.೧೦ ಕಿ.ಮೀ ಮ್ಯಾರಥಾನ್ ಸ್ಪರ್ಧೆ ವಿಜೇತರು : ಪುರುಷರ ವಿಭಾಗದಲ್ಲಿ ಶಿವಾನಂದ ನಾಯಕ್ (ಪ್ರಥಮ), ವೀರಪ್ಪ ಹಲಗಣ್ಣವರ (ದ್ವಿತೀಯ), ಪ್ರದೀಪ ಭಜಂತ್ರ (ತೃತೀಯ), ಮಹಿಳಾ ವಿಭಾಗದಲ್ಲಿ ಮೀನಾಕ್ಷಿ ಚಲವಣ್ಣವರ (ಪ್ರಥಮ), ವಿದ್ಯಾ ಲಮಾನಿ (ದ್ವಿತೀಯ), ಯಲ್ಲವ್ವ ಮದಭಾವಿ (ತೃತೀಯ).
೫ ಕಿ.ಮೀ ವಾಕಥಾನ್ ಸ್ಪರ್ಧೆ ವಿಜೇತರು : ಪುರುಷರ ವಿಭಾಗದಲ್ಲಿ ಸುರೇಶ ಆನೆಗುಂದಿ (ಪ್ರಥಮ), ವಿಠಲ ಕೆಂಚವ್ವಗೋಳ (ದ್ವಿತೀಯ) ಹಾಗೂ ಅಪ್ಪಾಸಾಹೇಬ ಲಿಗಾಡಿ (ತೃತೀಯ), ಮಹಿಳಾ ವಿಭಾಗದಲ್ಲಿ ನೇಹಾ ಗುಡಿ (ಪ್ರಥಮ), ಗೀತಾ ಐಗಳಿ (ದ್ವಿತೀಯ) ಹಾಗೂ ಗೌರಿ ಕೊವಳ್ಳಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.