Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

3ನೇ ದಿನಕ್ಕೆ ಕಾಲಿಟ್ಟ ಮಾಸ್ತಿಹೊಳಿ ರೈತರ ಅಹೋರಾತ್ರಿ ಧರಣಿ

ಕಚೇರಿ ಆವರಣದಲ್ಲೇ ಹಗಲು-ರಾತ್ರಿ ತಂಗಿ ಪ್ರತಿಭಟನೆ ಮುಂದುವರಿಸಿದ ರೈತರು-ಬೇಡಿಕೆ ನಿರ್ಲಕ್ಷಿಸಿದರೆ ಉಗ್ರ ಹೋರಾಟ ಖಚಿತ ಎಂದ ಅನ್ನದಾತರು

ಬೆಳಗಾವಿ: ಭೂಸ್ವಾಧೀನದಿಂದ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ, ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಹೌದು...ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಳಗಾವಿ ಉತ್ತರ ವಲಯ ಕಚೇರಿ ಎದುರು ಮಂಗಳವಾರದಿಂದ ಆರಂಭವಾದ ಈ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸರ್ಕಾರ ಹಾಗೂ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ಬಲಪಡಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲೇ ನಾಟಕ ಪ್ರದರ್ಶನ: ಕಳೆದ ಮೂರು ದಿನಗಳಿಂದ ಅಧಿಕಾರಿಗಳು ತಮ್ಮ ಗೋಳನ್ನು ಕೇಳಿಸಿಕೊಳ್ಳದೆ ಕಣ್ಣು ಮುಚ್ಚಿ ಕುಳಿತಿರುವುದನ್ನು ಖಂಡಿಸಿರುವ ರೈತರು, ನೀರಾವರಿ ಕಚೇರಿ ಆವರಣವನ್ನೇ ರಂಗಭೂಮಿಯನ್ನಾಗಿಸಿದ್ದಾರೆ. ರಾತ್ರಿಯಿಡೀ ಭಜನೆ ಮಾಡುವುದು, ಹಳ್ಳಿಯ ಹಿರಿಯ-ಕಿರಿಯರೆಲ್ಲ ಒಟ್ಟುಗೂಡಿ ಸಾಂಪ್ರದಾಯಿಕ 'ಸಂಗ್ಯಾ-ಬಾಳ್ಯಾ' ನಾಟಕದ ಪಾತ್ರಗಳನ್ನು ಅಭಿನಯಿಸುವ ಮೂಲಕ ಅಧಿಕಾರಿಗಳ ಬೇಜವಾಬ್ದಾರಿತನ ಅಣಕಿಸುತ್ತಿದ್ದಾರೆ. ನಮ್ಮಲ್ಲಿ ಕಣ್ಣೀರು ಮತ್ತು ಆಕ್ರೋಶ ಮಾತ್ರವಲ್ಲ, ಹೋರಾಟವನ್ನು ದೀರ್ಘಕಾಲ ಜೀವಂತವಾಗಿಡುವ ತಾಳ್ಮೆಯೂ ಇದೆ ಎಂಬುದನ್ನು ಕಲಾ ಪ್ರದರ್ಶನದ ಮೂಲಕ ರೈತರು ಸಾಬೀತುಪಡಿಸುತ್ತಿದ್ದಾರೆ.
ಕಚೇರಿ ಬಾರದ ಅಧಿಕಾರಿಗಳು: ಒಂದು ಕಡೆ ಮಾಸ್ತಿಹೊಳಿ ರೈತರು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಳಗಾವಿ ಉತ್ತರ ವಲಯ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದಡೆ ನೀರಾವರಿ ಅಧಿಕಾರಿಗಳು ಮಾತ್ರ ಕಚೇರಿಯತ್ತ ಆಗಮಿಸದೆ ದೂರ ಉಳಿದಿದ್ದಾರೆ. ಇದು ಪ್ರತಿಭಟನಾ ರೈತರ ಕಣ್ಣು ಕೆಂಪಾಗುವಂತೆ ಮಾಡಿದೆ.
ಅಧಿಕಾರಿಗಳ ಅಮಾನತಿಗೆ ಒತ್ತಾಯ: ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದೆ ಸರಣಿ ಸುಳ್ಳುಗಳನ್ನು ಹೇಳುತ್ತಾ, ನಕಲಿ ದಾಖಲೆ ಸೃಷ್ಟಿಸುತ್ತಿರುವ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ ಹಾಗೂ ಮುಖ್ಯ ಇಂಜಿನಿಯರ್ ಬಿ.ಆರ್. ರಾಠೋಡ ಅವರನ್ನು ಸರ್ಕಾರ ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ರೈತರ ಆಗ್ರಹಿಸಿದ್ದಾರೆ.
ಹೋರಾಟ ನಿಲ್ಲದು ಎಂದ ರೈತರು: ನಾವು ಶಾಂತಿಯುತವಾಗಿ, ನಮ್ಮ ಜಾನುವಾರುಗಳೊಂದಿಗೆ ನ್ಯಾಯಕ್ಕಾಗಿ ಕುಳಿತಿದ್ದೇವೆ. ಜಿಲ್ಲಾಡಳಿತವಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಅಧಿಕಾರ ಮತ್ತು ಪೋಲಿಸ್ ಬಲ ಬಳಸಿ ನಮ್ಮ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಿದರೆ ನಾವು ಅದಕ್ಕೆ ಹೆದರುವುದಿಲ್ಲ. ನಮ್ಮನ್ನು ಬಲವಂತವಾಗಿ ಇಲ್ಲಿಂದ ಎಬ್ಬಿಸಲು ನೋಡಿದರೆ, ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರತಿದಿನ ನೂರಾರು ಹೊಸ ರೈತರು ಸ್ವಯಂಪ್ರೇರಿತರಾಗಿ ಬಂದು ಹೋರಾಟಕ್ಕೆ ಧುಮುಕಲಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಅದಕ್ಕೆ ನೀರಾವರಿ ನಿಗಮದ ಅಧಿಕಾರಿಗಳೇ ನೇರ ಹೊಣೆ ಎಂದು ಧರಣಿ ನಿರತ ರೈತ ಮಹಿಳೆಯರು ಹಾಗೂ ಮುಖಂಡರು ಖಡಕ್ ಎಚ್ಚರಿಕೆ ನೀಡಿದರು.
ಸಚಿವರ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು: ತಪ್ಪು ದಾಖಲೆಗಳನ್ನು ತಿದ್ದುಪಡಿ ಮಾಡಿ ಸಮರ್ಪಕ ವರದಿಯನ್ನು  ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಅಧಿಕಾರಿಗಳು ಸಚಿವರ ಸೂಚನೆಯನ್ನು ಗಾಳಿಗೆ ತೂರಿದ್ದಾರೆ. ಎರಡು ತಿಂಗಳ ಕಾಲಾವಕಾಶ ಪಡೆದ ನೀರಾವರಿ ನಿಗಮದ ಅಧಿಕಾರಿಗಳು, ಮತ್ತೆ ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನೇ ಸೃಷ್ಟಿಸಿ ಕಳುಹಿಸುವ ಮೂಲಕ ರೈತರಿಗೆ ಹಾಗೂ ಸರ್ಕಾರಕ್ಕೆ ದ್ರೋಹ ಬಗೆದಿದ್ದಾರೆ ಎಂದು ರೈತ ಮುಖಂಡ ಬಾಳೇಶ ಮಾವನೂರೆ ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಾರೆ ಈ ಪ್ರತಿಭಟನೆಯಲ್ಲಿ ಮಹಿಳೆಯರು, ವೃದ್ಧರು ಎನ್ನದೆ ಹಗಲು, ರಾತ್ರಿ ಲೆಕ್ಕಿಸದೆ ಕಚೇರಿ ಆವರಣದಲ್ಲೇ ಊಟ, ನಿದ್ದೆ ಮಾಡುತ್ತಾ ರೈತರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದರೂ, ಅಧಿಕಾರಿಗಳು ಮಾತ್ರ ಮೌನ ವಹಿಸಿರುವುದು ಅನ್ನದಾತರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST