ಹಸಿರು ಕ್ರಾಂತಿ ವರದಿ ಬೆಳಗಾವಿ
ಕುಟುಂಬದ ಆರೋಗ್ಯ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ 3 ವರ್ಷದ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಜಯ ಸಿದ್ದಣ್ಣವರ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಕಚೇರಿ ಹಾಗೂ ಸಿದ್ಧರಾಮೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆಯಡಿ ತಾತ್ಕಾಲಿಕ ಹಾಗೂ ಶಾಶ್ವತ ಕುಟುಂಬ ನಿಯೋಜನೆಯ ಹಲವು ನೂತನ ವಿಧಾನಗಳು ಲಭ್ಯವಿದ್ದು, ಸಾರ್ವಜನಿಕರು ಅವುಗಳ ಸದುಪಯೋಗ ಪಡೆದು ಜನಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಸ್ಥಿರ ಅಭಿವೃದ್ಧಿ, ಉತ್ತಮ ಆರೋಗ್ಯ ಹಾಗೂ ಸಮತೋಲಿತ ಸಂಪನ್ಮೂಲ ಬಳಕೆಗೆ ಜನಸಂಖ್ಯೆ ನಿಯಂತ್ರಣ ಅನಿವಾರ್ಯವಾಗಿದೆ. ದೇಶ ಎದುರಿಸುತ್ತಿರುವ ಹಲವು ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಅನಿಯಂತ್ರಿತ ಜನಸಂಖ್ಯೆ ಪ್ರಮುಖ ಕಾರಣವಾಗಿದೆ ಎಂದರು.
ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದರಾಮೇಶ್ವರ ರೆಡ್ಡಿ, ಉಪಪ್ರಾಚಾರ್ಯ ಆರ್.ಬಿ.ಖೊತ, ವೈದ್ಯಾಧಿಕಾರಿಗಳಾದ ಡಾ.ಜಯವಂತ್ ಹಾಗೂ ಡಾ.ಹೇಮಲತಾ.ಎಚ್ ಅವರು ವಿಶ್ವ ಜನಸಂಖ್ಯಾ ದಿನದ ಉದ್ದೇಶ, ಕುಟುಂಬ ಕಲ್ಯಾಣ ಯೋಜನೆಗಳ ಮಹತ್ವ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಜನಜಾಗೃತಿಯ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜನಸಂಖ್ಯೆ ನಿಯಂತ್ರಣ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಜಯ್ ಸಿದ್ದಣ್ಣವರ್ ಚಾಲನೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಕು.ನಿವೇದಿತಾ ಗುಡದೂರ್ ಪ್ರಥಮ, ಕು.ಪೂಜಾ ಕೊಲ್ಕಾರ ದ್ವಿತೀಯ, ಕು.ಪ್ರೇಮ್ ನಾಯಕ್ ತೃತೀಯ ಸ್ಥಾನ ಪಡೆದರೆ, ಕು.ಶಕುಂತಲಾ ಲಮಾಣಿ ಸಮಾಧಾನಕರ ಬಹುಮಾನ ಪಡೆದರು. ವಿಜೇತರಿಗೆ ಗಣ್ಯರು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.
ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಪ್ರಕಾಶ್ ಜಿ.ಮಾಣೆ ನಿರೂಪಣೆ ಮಾಡಿದರು. ಪ್ರೊ.ಮುಬಾರಕ್ ಹುಕ್ಕೇರಿಕರ್ ವಂದಿಸಿದರು.
ಕುಟುಂಬದ ಆರೋಗ್ಯ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ 3 ವರ್ಷದ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ. ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆಯಡಿ ತಾತ್ಕಾಲಿಕ ಹಾಗೂ ಶಾಶ್ವತ ಕುಟುಂಬ ನಿಯೋಜನೆಯ ಹಲವು ನೂತನ ವಿಧಾನಗಳು ಲಭ್ಯವಿದ್ದು, ಸಾರ್ವಜನಿಕರು ಅವುಗಳ ಸದುಪಯೋಗ ಪಡೆದು ಜನಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕು.
-ಡಾ.ಸಂಜಯ ಸಿದ್ದಣ್ಣವರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು.