ಬಳ್ಳಾರಿ, ಅ. 30; ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿನ ವಿವಿಧ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಆಗ್ರಹಿಸಿ, ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈಲುಗಳ ಕೋಚ್ಗಳ ಮಾಹಿತಿಯನ್ನು ಡಿಸ್ಪ್ಲೇ ಮಾಡುವ ವ್ಯವಸ್ಥೆ, ಪ್ಲಾಟ್ಫಾರಂಗಳ ದುರಸ್ತಿ, ಲಿಫ್ಟ್ಗಳ ವ್ಯವಸ್ಥೆ, ಶೌಚಾಲಯಗಳ ಸೌಲಭ್ಯ, ಪ್ರಿಪೇಯ್ಡ್ ಆಟೋ ನಿಲ್ದಾಣ ಆರಂಭಿಸುವುದು ಹಾಗೂ ಮುಂಬೈನಿಂದ ಹೊಸಪೇಟೆಗೆ ಸಂಚರಿಸುವ ರೈಲನ್ನು ಬಳ್ಳಾರಿವರೆಗೆ ವಿಸ್ತರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಅಲ್ಲದೆ, ಬಳ್ಳಾರಿಗೆ ಹೊಸ ರೈಲುಗಳ ಸಂಚಾರ ಆರಂಭಿಸುವುದು ಸೇರಿದಂತೆ ನಿಲ್ದಾಣದಲ್ಲಿನ ಇತರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಕೋರಲಾಯಿತು.
ಈ ಕುರಿತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಪರವಾಗಿ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಸತೀಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್. ಪ್ರಕಾಶ್, ಉಪಾಧ್ಯಕ್ಷ ಬಾಣಾಪುರ ರಮೇಶಗೌಡ, ಖಜಾಂಚಿ ಪಿ. ಧನುಂಜಯ, ಜಂಟಿ ಕಾರ್ಯದರ್ಶಿ ಪಿ.ಎಂ. ನಟರಾಜ್, ವಿ. ರಾಮಚಂದ್ರ, ಜಿ.ಆರ್. ವೆಂಕಟೇಶಲು, ಕಾಳಿದಾಸ್, ಪಿ. ಶ್ರೀನಿವಾಸಲು, ಶೇಷರೆಡ್ಡಿ, ಗುರುನಾಥ ಭಟ್ ಹಾಗೂ ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು.