ಬಳ್ಳಾರಿ, ಏ.18: ಗುರುವಾರ ಶಾಸಕ ನಾರಾ ಭರತ್ ರೆಡ್ಡಿಯವರು ಮಹರ್ಷಿ ವಾಲ್ಮೀಕಿ ವೃತ್ತ ಸಮೀಪದ ಶಾಸಕರ ವಿಶೇಷ ಅನುದಾನದ ಅಡಿ ನಿರ್ಮಾಣ ಮಾಡಲಾಗಿರುವ ಮಳಿಗೆಗಳನ್ನು ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸಿದರು.
ಫಲಾನುಭವಿಗಳಿಂದಲೇ ಚೀಟಿ ಎತ್ತಿ ಆಯ್ಕೆ ಮಾಡುವ ಮೂಲಕ ವಿತರಿಸಲಾಯಿತು. ಈ ಸಂದರ್ಭ ಪಾಲಿಕೆಯ ಆಯುಕ್ತ ಮಂಜುನಾಥ, ಮೇಯರ್ ಗಾದೆಪ್ಪ, ಪಾಲಿಕೆಯ ಸದಸ್ಯರಾದ ಗುಡಿಗಂಟಿ ಹನುಮಂತ, ಕುಬೇರಾ ಸೇರಿದಂತೆ ಇತರರು ಹಾಜರಿದ್ದರು.
ತದನಂತರ ಬಳ್ಳಾರಿಯ 39ನೇ ವಾರ್ಡ್ ವ್ಯಾಪ್ತಿಯ ನೇತಾಜಿ ನಗರದ ಶ್ರೀಗಣೇಶ ದೇವಸ್ಥಾನದ ಬಳಿ ಅಂದಾಜು 80.63 ಲಕ್ಷ ರೂ.ಗಳ ವೆಚ್ಚದಲ್ಲಿ ಒಳ ಚರಂಡಿ ರಿಪೇರಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ವಾರ್ಡಿನ ಮುಖಂಡ ಪಿ.ಜಗನ್, ಹಿರಿಯರಾದ ಮಾರೆಣ್ಣ, ಎರುಕುಲಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಸೋಮಶೇಖರ್, ಸಿದ್ಧೇಶ್, ಸುಬ್ಬರಾಯುಡು, ನರೇಂದ್ರ ಮತ್ತಿತರರು ಹಾಜರಿದ್ದರು.
ಬಳಿಕ ವಾರ್ಡ್ ಸಂಖ್ಯೆ 36ರ ವ್ಯಾಪ್ತಿಯ ಹಾವಂಭಾವಿ ಕಾಲುವೆ ಬಳಿ ರಸ್ತೆ ಅಭಿವೃದ್ಧಿ, ಮಳೆ ನೀರು ಚರಂಡಿ, ಒಳ ಚರಂಡಿ ಹಾಗೂ ಪೇವರ್ಸ್ ಅಳವಡಿಕೆಗೆ ಅಂದಾಜು 2 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ತದನಂತರ ಇದೇ ವಾರ್ಡಿನ ಹಾವಂಭಾವಿ ಕಾಲುವೆ ಬಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದು ಕೊಠಡಿಯ ನಿರ್ಮಾಣಕ್ಕಾಗಿ ಅಂದಾಜು 16.5 ಲಕ್ಷ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದೆ. ಈ ಸಂದರ್ಭ ವಾರ್ಡಿನ ಮುಖಂಡ ಟಿ.ಎಂ.ಜಿ.ಲೋಕೇಶ್, ಗಂಗಪ್ಪ, ಗಂಗಾಧರ್, ಸೋಮು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕಿಯರು, ಮತ್ತಿತರರು ಹಾಜರಿದ್ದರು.
ತದನಂತರ ಗಡಿಗಿ ಚನ್ನಪ್ಪ ವೃತ್ತ ಬಳಿ ಸಂಚಾರಿ ಅಸ್ತವ್ಯಸ್ತತೆಯ ಬಗ್ಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದರು.
ನಂತರ ಸಂಜೆಯ ವೇಳೆ ನಿರ್ಮಾಣ ಹಂತದಲ್ಲಿರುವ ಗುಗ್ಗರಹಟ್ಟಿಯ ಸೇತುವೆ, ರಸ್ತೆಯ ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.


