ಬೈಲಹೊಂಗಲ- ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಗಣ್ಯ ಮನೆತನದ ಯೋಗ ಶಿಕ್ಷಕ, ಉಪನ್ಯಾಸಕ, ಸಾಹಿತಿ ಹಾಗೂ ಭಾರತೀಯ ಸಂಸ್ಕೃತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸಂತೋಷ ಶಂಕರೆಪ್ಪ ಯಕ್ಕುಂಡಿ ಅವರು ಬೆಂಗಳೂರಿನ ರೋಟರಿ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆ ಮತ್ತು ಅಮೆರಿಕ ಯೋಗ ಯೂನಿವರ್ಸಿಟಿ ಆಫ್ ಅಮೆರಿಕ ಇವರು ಪ್ರದಾನ ಮಾಡಿದ ರಾಷ್ಟ್ರಮಟ್ಟದ ಯೋಗ ರತ್ನ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಬೈಲಹೊಂಗಲ ಪಟ್ಟಣದ ಗ್ಯಾಲಾಕ್ಸಿ ಗಾರ್ಡನದ ಸಭಾಂಗಣದಲ್ಲಿ ಕಾವ್ಯ ಭೂಮಿ ಪ್ರಕಾಶನದಿಂದ ಕವಿ,ಕಥೆಗಾರ, ವಿಮರ್ಶಕ, ಸಂಶೋಧಕರು ಬೈಲಹೊಂಗಲ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಮಲ್ಲಿಕಾರ್ಜುನ ಶಿವಪ್ಪ ಛಬ್ಬಿಯವರು ಸನ್ಮಾನಿಸಿ, ಅಭಿನಂದಿಸಿ, ಗೌರವಿಸಿದರು.
ಖ್ಯಾತ ಉದ್ದಿಮೆದಾರರಾದ ಮಹಾಂತೇಶ ಎಸ್.ಪಾಟೀಲ ಅವರು ಮಾತನಾಡಿ, ಡಾ. ಸಂತೋಷ ಗುರೂಜಿಯವರು ಕಳೆದ 24 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ 20,000ಗಳಿಗಿಂತ ಹೆಚ್ಚಿನ ಜನರಿಗೆ ಯೋಗ ತರಬೇತಿಯನ್ನು ನೀಡಿರುವರು ಅವರು ಬಾಲ್ಯದಲ್ಲಿ ಕಡು ಬಡತನದ ಕುಟುಂಬದಲ್ಲಿ ಜನಿಸಿದರೂ ಸಹಿತ ಖ್ಯಾತ ಚಿತ್ರ ಕಲಾವಿದ, ಸಾಹಿತಿ ಎಂ.ಪಿ. ಕಳಸದ ಇವರ ಮಾರ್ಗದರ್ಶನ ಸಿಕ್ಕಿರುವುದರಿಂದ ತಮ್ಮ ಯೌವ್ವನದ ವಯಸ್ಸಿನಲ್ಲಿ ತಮ್ಮ ಸಂಪೂರ್ಣ ಗಮನವನ್ನು ಶಿಕ್ಷಣದ ಮೇಲೆ ಕೇಂದ್ರೀಕರಿಸಿ ಭಾರತೀಯ ಗ್ರಾಮ ವಿಕಾಸ ಹಾಗೂ ಸ್ಫೂರ್ತಿದಾಯಕ ನಾಯಕತ್ವ ರೂಪಿಸುವ ಮಹಾವಿದ್ಯಾಲಯ ಬಿ.ಎ. ತತ್ಸಮಾನ ಪದವಿಯಲ್ಲಿ ಪ್ರಥಮ ರ್ಯಾಂಕ್, ಎಂ.ಎ. ತತ್ವಶಾಸ್ತ್ರ ಪದವಿಯಲ್ಲಿ ಸುವರ್ಣ ಪದಕ, ಡಿಪ್ಲೋಮಾ ಯೋಗ ಸ್ಟಡೀಸ್ ನಲ್ಲಿ ಡಿಸ್ಟಿಂಕ್ಷನ್, 2026 ರಲ್ಲಿ ಅನುಭಾವಿಗಳಾಗಿ ಶ್ರೀ ಚೆನ್ನಬಸವಣ್ಣನವರು ಮತ್ತು ಸಂತ ಶಿಶುನಾಳ ಶರೀಫರು ಒಂದು ತೌಲನಿಕ ಅಧ್ಯಯನ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸಲ್ಲಿಸಿ ಪಿಎಚ್.ಡಿ ಪದವಿಯನ್ನು ಪಡೆದಿರುವವರಾಗಿರುತ್ತಾರೆ ಎಂದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು,ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರಾದ ಮೋಹನ ಬಸನಗೌಡ ಪಾಟೀಲ ಇವರು ಮಾತನಾಡಿ ಡಾ. ಸಂತೋಷ ಗುರೂಜಿ ಅವರು ಬಳ್ಳಾರಿ ನಗರದಲ್ಲಿ ಪದವಿಪೂರ್ವ ಕಾಲೇಜಿನ ತರ್ಕಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಮಕ್ಕಳಿಗೆ ಯೋಗ ಶಿಕ್ಷಣ ನೀಡುವುದು, ಕತೆ, ಕವನ, ಪ್ರಬಂಧ ರಚಿಸುವುದು, ಚಿತ್ರಕಲೆ, ಜೊತೆಗೆ ಸಂಶೋಧನಾ ಕಾರ್ಯವನ್ನು ಪೂರೈಸಿದ್ದು ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡು ಒಬ್ಬ ಪ್ರತಿಭಾನ್ವಿತ ವ್ಯಕ್ತಿ ನಮ್ಮ ಭಾಗದಲ್ಲಿ ಇರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ ಆಗಿದೆ ಎಂದರು.
ಬೈಲಹೊಂಗಲ ಅಲ್ಪಸಂಖ್ಯಾತರ ನಾಯಕ ಮೆಹಬೂಬ ಸುಭಾನಿ ಸಿಕಂದರ ಚಿಕ್ಕ ಮುನವಳ್ಳಿ ಅವರು ಮಾತನಾಡಿ ಡಾ. ಸಂತೋಷ ಶಂ. ಯಕ್ಕುಂಡಿ ಅವರು ಎಲೆ ಮರೆಯ ಕಾಯಿಯಂತಿರುವ ಹಲವಾರು ಯೋಗಪಟುಗಳನ್ನು ಬೆಳಕಿಗೆ ತಂದಿರುವ ಗುರೂಜಿ ಅವರು ಇಂದು ಗಾಂಧಾರಿ ವಿದ್ಯೆ ತರಬೇತಿಯನ್ನು ಹಮ್ಮಿಕೊಂಡಿದ್ದಾರೆ. ಇದು ಮಕ್ಕಳ ಅಂತ:ಚಕ್ಷುವಿನ ಜಾಗೃತಿಯಾಗಿ ಇದರಿಂದ ಮಕ್ಕಳ ಏಕಾಗ್ರತೆ, ಬುದ್ಧಿಶಕ್ತಿ ಅಧಿಕಗೊಂಡು ಮಕ್ಕಳು ಓದಿನಲ್ಲಿ ಪ್ರಗತಿ ಸಾಧಿಸಲು ಮತ್ತಷ್ಟು ಸಹಾಯಕಾರಿಯಾಗಿದೆ ಎಂದರು.
ಬೈಲಹೊಂಗಲ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ ಅವರು ಮಾತನಾಡಿ ಡಾ. ಸಂತೋಷ ಶಂಕರೆಪ್ಪ ಯಕ್ಕುಂಡಿ ಅವರು ಯೋಗ ಶಿಕ್ಷಕರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವುದು ಅಷ್ಟೇ ಅಲ್ಲದೆ ಮಕ್ಕಳ ಸಾಹಿತಿಗಳಾಗಿ 'ಚಿಣ್ಣರ ಚಿಲಿಪಿಲಿ' ಎಂಬ ಮಕ್ಕಳ ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ನೀಡುತ್ತಿರುವುದು ನಮಗೆ ವೈಯಕ್ತಿಕವಾಗಿ ಹೆಮ್ಮೆಯ ವಿಷಯವಾಗಿದೆ ಎಂದರು.
ಯುವ ಮುಖಂಡ ಸಂತೋಷ ವೀರಭದ್ರಪ್ಪ ಈಟಿ ನಿರೂಪಣೆ ಮಾಡಿದರು. ಸಿಕಂದರ ಕುತಬುದ್ದೀನ್ ಪಾರಿಶ್ವಾಡ ಸ್ವಾಗತಿಸಿದರು ರಾಮ ವೀರಬಹಾದ್ದೂರ ಶ್ರೇಷ್ಠ ವಂದಿಸಿದರು.