ಸವದತ್ತಿ : ಪುಸ್ತಕಗಳ ಓದು ವ್ಯಕ್ತಿಯ ಜ್ಞಾನವೃದ್ಧಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಸಾಹಿತ್ಯ ಕ್ಷೇತ್ರದ ಮಹತ್ವದ ಕೊಡುಗೆಯಾಗಿದೆ ಎಂದು ಬೈಲಹೊಂಗಲ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಅಸುಂಡಿ ಗ್ರಾಮದ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಮಲಪ್ರಭಾ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬಸವೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿವರಾಯ ಕರೀಕಟ್ಟಿ ಸಂಪಾದಿತ ಅಣ್ಣ ಕಂಡ ಅಮೇರಿಕ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದೇಶ ಪ್ರವಾಸದ ಅನುಭವಗಳು, ಅಲ್ಲಿನ ಜನಜೀವನ, ಸಂಸ್ಕೃತಿ, ಶಿಕ್ಷಣ ಮತ್ತು ಅಭಿವೃದ್ಧಿಯ ಮಾದರಿಗಳನ್ನು ಕೃತಿಯ ಮೂಲಕ ಪರಿಚಯಿಸುವುದು ಉತ್ತಮ ಪ್ರಯತ್ನವಾಗಿದೆ. ಇಂತಹ ಪುಸ್ತಕಗಳು ಓದುಗರಿಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಡುವುದರ ಜತೆಗೆ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜತೆಗೆ ಉತ್ತಮ ಸಾಹಿತ್ಯ ಕೃತಿಗಳನ್ನೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕೃತಿಯ ಸಂಪಾದಕ ಶಿವರಾಯ ಕರೀಕಟ್ಟಿ ಮಾತನಾಡಿ, ಪ್ರವಾಸದ ಸಂದರ್ಭದಲ್ಲಿ ಕಂಡುಂಡ ಅನುಭವಗಳು ಕೇವಲ ವೈಯಕ್ತಿಕ ನೆನಪುಗಳಾಗಿ ಉಳಿಯಬಾರದು. ಅವುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿದಾಗ ಮುಂದಿನ ಪೀಳಿಗೆಗೆ ಉಪಯುಕ್ತ ಮಾಹಿತಿಯಾಗುತ್ತವೆ. ಅಮೆರಿಕ ಪ್ರವಾಸದ ವೇಳೆ ಕಂಡ ಅನುಭವಗಳು, ಅಲ್ಲಿನ ಜೀವನಶೈಲಿ, ವ್ಯವಸ್ಥೆ ಹಾಗೂ ವೈಶಿಷ್ಟ್ಯಗಳನ್ನು ಓದುಗರಿಗೆ ಪರಿಚಯಿಸುವ ಉದ್ದೇಶದಿಂದ 'ಅಣ್ಣ ಕಂಡ ಅಮೇರಿಕ' ಕೃತಿ ಸಂಪಾದಿಸಲಾಗಿದೆ ಎಂದರು.
ಡಾ. ಬಿ.ಎಂ. ಪಾಟೀಲ ಕೃತಿ ಲೋಕಾರ್ಪಣೆಗೊಳಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ. ಬಾಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ಕರೀಕಟ್ಟಿ ಅವರಿಂದ ನೀಡಲಾಗುವ ಪ್ರತಿಭಾ ಪುರಸ್ಕಾರವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನಿವೃತ್ತ ಉಪನ್ಯಾಸಕ ಎಚ್.ಕೆ. ಗುರವ ಉಪನ್ಯಾಸ ನೀಡಿದರು.
ಮಲಪ್ರಭಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಶೆಟ್ಟರ, ಈರಪ್ಪ ತೋಟಗೇರ, ರಾಘವೇಂದ್ರ ಸರದೇಸಾಯಿ, ಮಲ್ಲಪ್ಪ ಮಲ್ಲೂರ, ಬಿ.ವಿ.ಬಿ. ನರಗುಂದ, ಸುಧೀರ ವಾಲಿ, ಮಹಾಂತೇಶ ಕರೀಕಟ್ಟಿ,
ಎಸ್.ಪಿ. ಇಟ್ನಾಳಮಠ, ಮಡಿವಾಳಪ್ಪ ದೇವಲಾಪೂರ ಹಾಗೂ ಮಂಜುನಾಥ ಗಾಣಗೇರ ಇನ್ನಿತರಿದ್ದರು.