ಎಪಿಎಂಸಿ ನಿಯಮ ಉಲ್ಲಂಘನೆ * ಅನಧಿಕೃತ ಮೇಲ್ಮಹಡಿ ಕಟ್ಟಡ, ಮಳಿಗೆ ನಿರ್ಮಾಣ
ತಾಳಿಕೋಟೆ, ಲೀಸ್-ಕಂ-ಸೇಲ್ ಕರಾರಿನ ಷರತ್ತು ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತಕ್ಕೆ ಹಂಚಿಕೆ ಮಾಡಲಾಗಿದ್ದ ಮೂಲೆ ನಿವೇಶನ ಸಂಖ್ಯೆ ೨೭ ಹಾಗೂ ಅದರಲ್ಲಿರುವ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿಗಳು ಕಳೆದ ದಿ. ೧೪ ರಂದೇ ಅಧಿಕೃತ ಆದೇಶ ಹೊರಡಿಸಿದ್ದಾರೆ.
೨೦೨೧ರ ಅಕ್ಟೋಬರ್ ೧೬ರಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಆದೇಶದ ಮೇರೆಗೆ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ ಲೀಸ್-ಕಂ-ಸೇಲ್ ಆಧಾರದ ಮೇಲೆ ನಿವೇಶನ ಸಂಖ್ಯೆ ೨೭ನ್ನು ಹಂಚಿಕೆ ಮಾಡಲಾಗಿತ್ತು. ತಾಂತ್ರಿಕ ವರದಿಯ ಪ್ರಕಾರ ಸದರಿ ನಿವೇಶನದಲ್ಲಿ ನೆಲಮಹಡಿ ನಿರ್ಮಾಣಕ್ಕೆ ಮಾತ್ರ ಅನುಮೋದನೆ ನೀಡಲಾಗಿತ್ತು. ಆದರೆ, ಸಂಘದವರು ಅನುಮೋದಿತ ನಕ್ಷೆ ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಿ ಮೊದಲನೇ ಮಹಡಿಯನ್ನು ನಿರ್ಮಿಸಿಕೊಂಡಿರುವುದಲ್ಲದೆ, ಹಂಚಿಕೆಯ ಉದ್ದೇಶವಾದ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಕಟ್ಟಡವನ್ನು ಸಂಪೂರ್ಣವಾಗಿ ಬಳಸದೆ ಇತರ ವ್ಯವಹಾರಸ್ಥರಿಗೆ ಅಂಗಡಿಗಳನ್ನು ಬಾಡಿಗೆಗೆ ನೀಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ವಿಜಯಪುರದ ಗುರಲಿಂಗಪ್ಪ ನಿಂ. ಗುನ್ನಾಪೂರ ಅವರು ಎಪಿಎಂಸಿ ನಿಯಮಗಳನ್ನು ಗಾಳಿಗೆ ತೂರಿ ಸಂಪೂರ್ಣ ಉಲ್ಲಂಘಿಸಿರುವ ಕುರಿತು ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ಕೃಷಿ ಮಾರಾಟ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಾಳಿಕೋಟೆ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಕಟ್ಟಡ ನಿರ್ಮಾಣ ಹಾಗೂ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಎಪಿಎಂಸಿ ಸಮಿತಿಯಿಂದ ಸಂಘಕ್ಕೆ ಹಲವು ಬಾರಿ ತಿಳುವಳಿಕೆ ಪತ್ರಗಳನ್ನು ನೀಡಲಾಗಿತ್ತು.
ಇದಕ್ಕೆ ಪ್ರತಿಯಾಗಿ ಸಂಘದವರು ಸೆ. ೨೯, ೨೦೨೬ರಂದು ಮನವಿ ಸಲ್ಲಿಸಿ, ಅನ್ಯ ವ್ಯವಹಾರಸ್ಥರಿಗೆ ಬಾಡಿಗೆಗೆ ನೀಡಿರುವ ಅಂಗಡಿಗಳನ್ನು ತೆರವುಗೊಳಿಸಿ ಬ್ಯಾಂಕಿನ ಉದ್ದೇಶಕ್ಕೆ ಕಟ್ಟಡವನ್ನು ಬಳಸಿಕೊಳ್ಳುವುದಾಗಿ ತಿಳಿಸಿದ್ದರು. ಆದಾಗ್ಯೂ, ಲೀಸ್ ಕರಾರಿನ ಷರತ್ತುಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅ. ೫ರಂದು ನಡೆದ ಎಪಿಎಂಸಿ ಸಮಿತಿಯ ಸಾಮಾನ್ಯ ಸಭೆಯಲ್ಲಿ ನಿವೇಶನ ಹಾಗೂ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿತ್ತು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳು ೨೦೦೪ರ ನಿಯಮ ೧೭(೩)(ವ್ಹಿ), ೨೦(೧) ಹಾಗೂ ೨೨ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಯಾವುದೇ ಪರಿಹಾರ ನೀಡದೆ ನಿವೇಶನ ಸಂಖ್ಯೆ ೨೭ ಹಾಗೂ ಅದರಲ್ಲಿರುವ ಕಟ್ಟಡವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಾಳಿಕೋಟೆ ಎಪಿಎಂಸಿ ಕಾರ್ಯದರ್ಶಿ ಆರ್.ಎಸ್. ರಾಠೋಡ ಅವರು ನವೆಂಬರ್ ೧೪, ೨೦೨೬ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶದಿಂದ ತಾಳಿಕೋಟೆ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿನ ನಿವೇಶನ ಹಂಚಿಕೆ ಮತ್ತು ಕಟ್ಟಡಗಳ ಬಳಕೆಗೆ ಸಂಬಂಧಿಸಿದ ನಿಯಮಗಳ ಪಾಲನೆಯ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
---
ಹೆಸರಿಗೆ ಆದೇಶ ಮುಟ್ಟುಗೋಲು ಆಗಿಲ್ಲಾ
ತಾಳಿಕೋಟೆ ಎಪಿಎಂಸಿ ಪ್ರಾಂಗಣದಲ್ಲಿ ಮೂಲೆ ಸಿವೇಶನ್ ೨೭ನ್ನು ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ನಿ,ಕ್ಕೆ ನೀಡಲಾದ ನಿವೇಶನದಲ್ಲಿ ಕಳೆದ ದಿ.೧೪ ರಂದೇ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ನಿ,ಕ್ಕೆ ನೀಡಲಾಗಿರುವ ಕಟ್ಟಡ ಸಹೇತವಾಗಿ ಯಾವುದೇ ಪರಿಹಾರ ನೀಡದೇ ಮುಟ್ಟುಗೋಲು ಹಾಕಿಕೊಂಡಿರುವ ಎಪಿಎಂಸಿ ಅಧಿಕಾರಿಯ ಆದೇಶ ಪಾಲನೆಯಾಗಿಲ್ಲಾವೆಂದು ದೂರುದಾರ ಗುರಲಿಂಗಪ್ಪ ಗುನ್ನಾಪೂರ ಅವರು ಆರೋಪಿಸಿದ್ದಾರೆ.
ಎಪಿಎಂಸಿ ಕಾರ್ಯದರ್ಶಿ ರಾಜು ರಾಠೋಡ ಅವರು ಹೊರಡಿಸಿರುವ ಆದೇಶ ಹೆಸರಿಗೆ ಮಾತ್ರವೆಂಬಂತಾಗಿದೆ ಸದರಿ ನಿವೇಶನದಲ್ಲಿಯ ಬ್ಯಾಂಕ್ ಮತ್ತು ಬಾಡಿಗೆ ನೀಡಲಾದ ಮಳೆಗಳಲ್ಲಿ ಅಂಗಡಿಗಳು ಎಂದಿನಂತೆ ವ್ಯವಹಾರ ನಡೆಸಿವೆ ಇದನ್ನು ಗಮನಿಸಿದರೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬ ಅಧಿಕಾರಿಗಳ ಆದೇಶವೇ ಎದ್ದು ಕಾಣುತ್ತಿಲ್ಲಾ ಎಪಿಎಂಸಿ ಕಾರ್ಯದರ್ಶಿ ರಾಜು ರಾಠೋಡ ಅವರ ನಡೆಯ ಮೇಲೆ ಸಂಶಯ ಮೂಡಿದೆ ಕೂಡಲೇ ಸಂಪೂರ್ಣ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಂಡು ಸೀಜ್ ಮಾಡಿ ಎಪಿಎಂಸಿಯ ವಶಕ್ಕೆ ಪಡೆಯಬೇಕು ಇಲ್ಲದಿದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಏಕಾಂಗಿಯಾಗಿ ಧರಣಿ ಸತ್ಯಾಗ್ರಹ ನಡೆಸುತ್ತೇನೆಂದು ಪತ್ರಿಕೆ ದಿ.೧೭ ರಂದು ಮಳಿಗೆಗಳಲ್ಲಿಯ ಅಂಗಡಿಗಳು ವ್ಯವಹಾರ ನಡೆಸಿದ್ದರ ಬಗ್ಗೆ ತೆಗೆಯಲಾದ ಜಿಪಿಎಸ್ ಪೋಟೋ ಸಮೇತ ಪತ್ರಿಕೆಗೆ ಒದಗಿಸಿ ಎಪಿಎಂಸಿ ಕಾರ್ಯದರ್ಶಿ ರಾಜು ರಾಠೋಡ ಅವರ ಮುಟ್ಟುಗೋಲು ಆದೇಶ ಮತ್ತು ನಡೆಯ ಮೇಲೆ ಸಂಶಯ ಮೂಡಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.