ಬಳ್ಳಾರಿ, ಆ.19: ಮಹಿಳೆಯರಿಗೆ ವೇದಿಕೆ ಕಲ್ಪಿಸುವ ಮೂಲಕ ಅವರಲ್ಲಿನ ಪ್ರತಿಭೆಗೆ ಹುಮ್ಮಸ್ಸು ತುಂಬುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಟಚ್ ಫಾರ್ ಲೈಫ್ ಫೌಂಡೇಶನ್ನಿನ ನಿರ್ದೇಶಕಿ ನಾರಾ ವೈಜಯಂತಿ ರೆಡ್ಡಿ ಹೇಳಿದರು.
ನಗರದ ಖಾಸಗಿ ಹೊಟೇಲಿನ ಸಭಾಂಗಣದಲ್ಲಿ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಕಾಂತಿಯ ಹೊಸ ಕ್ರಾಂತಿ- ಒಂದು ದಿನದ ಪ್ರಸಾದನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಮಹಿಳೆಯರಲ್ಲಿಯೂ ಒಂದು ಪ್ರತಿಭೆ ಇರುತ್ತದೆ, ಅವರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕಿರುವುದಿಲ್ಲ, ಆ ಪ್ರೋತ್ಸಾಹ ನೀಡುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.
ದಿನನಿತ್ಯದ ಬದುಕಿನಲ್ಲಿ ಮಹಿಳೆಯರು ತಮ್ಮ ಕುಟುಂಬ, ಮಕ್ಕಳು-ಪತಿಗಾಗಿ, ಕುಟುಂಬದ ಸದಸ್ಯರಿಗಾಗಿ ಶ್ರಮಿಸುತ್ತಾರೆ, ಕಾಲಾಂತರದಲ್ಲಿ ನನ್ನಲ್ಲೂ ಒಂದು ಪ್ರತಿಭೆ ಇತ್ತು ಅಂತ ಒಂದು ದಿನ ಅನಿಸುತ್ತದೆ, ಹೀಗಾಗಿ ಮಹಿಳೆಯರ ಪ್ರತಿಭೆ ವ್ಯರ್ಥ ಆಗಬಾರದೆಂಬ ಕಾರಣಕ್ಕೆ ಅವರನ್ನು ಪ್ರೋತ್ಸಾಹಿಸಲು ಈ ಕಾರ್ಯಾಗಾರ ಆಯೋಜಿಸಿದ್ದೇವೆ ಎಂದು ನಾರಾ ವೈಜಯಂತಿ ರೆಡ್ಡಿ ಹೇಳಿದರು.
ಕಲಿಕಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತೊಂದು ಇದೇ ರೀತಿಯ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.
ಐದು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು, ಗೃಹಿಣಿಯರು ಕಾರ್ಯಾಗಾರದಲ್ಲಿ ಭಾಗಿಯಾದರು. ಭಾಗಿಯಾದ ಕಲಿಕಾರ್ಥಿಗಳಿಗೆ ನಾರಾ ವೈಜಯಂತಿ ರೆಡ್ಡಿ ಅವರು ಪ್ರಮಾಣಪತ್ರ ಹಾಗೂ ಉಚಿತವಾಗಿ ಮೇಕಪ್ ಕಿಟ್ ನೀಡಲಾಯಿತು.
ಈ ಸಂದರ್ಭ ಪಾಲಿಕೆಯ ಸದಸ್ಯೆ, ಮಾಜಿ ಮೇಯರ್ ಎಂ.ರಾಜೇಶ್ವರಿ, ಪದ್ಮಾ, ಮಂಜುಳಾ, ಚಂಪಾ ಚವ್ಹಾಣ್, ಯಶೋದಾ, ಶಮೀಮ್ ಜಕ್ಲಿ, ಕವಿತಾ, ಜ್ಯೋತಿ, ನಸೀಮಾ, ಸಲ್ಮಾ ಎಸ್.ಕೆ, ಕೆ.ಎಂ.ಅಭಿನಯ, ಚಾನಾಳ್ ಲತಾ ಮತ್ತಿತರರು ಹಾಗರಿದ್ದರು.