ಚನ್ನಮ್ಮನ ಕಿತ್ತೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕೆಪಿಎಸ್ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆ ಇದೀಗ ಐತಿಹಾಸಿಕ ಚನ್ನಮ್ಮನ ಕಿತ್ತೂರಿಗೂ ತಲುಪಿದ್ದು, ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಂಗಳವಾರ ಮುಂಜಾನೆ ಪಟ್ಟಣದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕಿತ್ತೂರಿನ ಬೀಡಿ ರಸ್ತೆಯ ಸದಾಶಿವನಗರದಲ್ಲಿ ಇರುವ ಕುಬೇರ ಜಾಯಕ್ಕನವರ ಅವರ ನಿವಾಸಕ್ಕೆ ED ಅಧಿಕಾರಿಗಳ ತಂಡ ಬೆಳಗ್ಗೆಯೇ ಆಗಮಿಸಿ ತಪಾಸಣೆ ಕೈಗೊಂಡಿದೆ. ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರಗಳು ಹಾಗೂ ಇತರ ದಾಖಲೆಗಳ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಪರಿಶೀಲನೆ ನಡೆದಿದೆ ಎನ್ನಲಾಗಿದೆ.
ಕುಬೇರ ಜಾಯಕ್ಕನವರ ಅವರ ತಂಗಿಯ ಪುತ್ರ ಅಭಿಷೇಕ್ ಮಹಾದೇವ ದೇವಲಾಪುರ ಅವರು ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಯ ವ್ಯಾಪ್ತಿಯಲ್ಲಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕಿತ್ತೂರಿನಲ್ಲಿರುವ ಸಂಬಂಧಿಕರ ನಿವಾಸದಲ್ಲೂ ED ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿರುವ ಅಭಿಷೇಕ್ ಅವರ ನಿವಾಸದಲ್ಲಿ ಪರಿಶೀಲನೆ ನಡೆಸಿದ ಬಳಿಕ, ಅವರ ಕುಟುಂಬದ ಸದಸ್ಯರು ಕಿತ್ತೂರಿನ ಸದಾಶಿವನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಇರುವ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಇದರ ಬೆನ್ನಲ್ಲೇ ಅಧಿಕಾರಿಗಳ ತಂಡ ಕಿತ್ತೂರಿಗೆ ಆಗಮಿಸಿ ತಪಾಸಣೆ ಮುಂದುವರಿಸಿದೆ ಎನ್ನಲಾಗಿದೆ.
ಬಿಗಿ ಭದ್ರತೆಯಲ್ಲಿ ತಪಾಸಣೆ
EDಯ ಇಬ್ಬರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗೆ ಮೂವರು CRPF ಸಿಬ್ಬಂದಿ ಭದ್ರತೆ ಒದಗಿಸಿದ್ದಾರೆ. ಮನೆಯ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಅಧಿಕಾರಿಗಳು ಮನೆಯೊಳಗಿನ ಕಡತಗಳು, ದಾಖಲೆಗಳು ಹಾಗೂ ಇತರ ವಸ್ತುಗಳನ್ನು ಪರಿಶೀಲನೆ ನಡೆಸಿದ್ದಾರೆ.
KPSC ನೇಮಕಾತಿ ಅಕ್ರಮದ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಕುತೂಹಲದ ನಡುವೆ ಕಿತ್ತೂರಿನಲ್ಲಿ ನಡೆದ ಈ ದಾಳಿ ಸ್ಥಳೀಯವಾಗಿ ಭಾರೀ ಗಮನ ಸೆಳೆದಿದೆ. ಆದರೆ, ದಾಳಿಯ ವೇಳೆ ಯಾವ ದಾಖಲೆಗಳು ಅಥವಾ ವಸ್ತುಗಳು ಪತ್ತೆಯಾಗಿವೆ ಎಂಬುದರ ಕುರಿತು ED ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ತನಿಖೆಯ ಮುಂದಿನ ಬೆಳವಣಿಗೆಗಳತ್ತ ಕುತೂಹಲ
ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಹಣಕಾಸಿನ ವಹಿವಾಟು ಹಾಗೂ ಇತರ ಸಂಪರ್ಕಗಳ ಕುರಿತು ತನಿಖೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಿತ್ತೂರಿನಲ್ಲಿನ ಈ ಪರಿಶೀಲನೆ ಮಹತ್ವ ಪಡೆದಿದೆ. ಅಧಿಕಾರಿಗಳ ತಪಾಸಣೆ ಪೂರ್ಣಗೊಂಡ ಬಳಿಕವೇ ದಾಳಿಯ ಸಂಪೂರ್ಣ ವಿವರಗಳು ಮತ್ತು ಯಾವುದೇ ವಸ್ತುಗಳು ವಶಪಡಿಸಿಕೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಲಿದೆ.