ಬೆಳಗಾವಿ: ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ಹಾಗೂ ಕನ್ನಡಿಗರ ಸ್ವತ್ತು ಎಂಬ ಘೋಷಣೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಬುಧವಾರ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಕರವೇ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಜಮಾಯಿಸಿ, ಪಾಲಿಕೆಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ಈ ವೇಳೆ ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ”, “ಬೆಳಗಾವಿ ಕನ್ನಡಿಗರ ಸ್ವತ್ತು” ಎಂಬ ಘೋಷಣೆಗಳನ್ನು ಕೂಗಿದರು.
ಮುತ್ತಿಗೆ ಯತ್ನದ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್. ಅಭಿಲಾಷ್, “ಕನ್ನಡದ ನೆಲ, ಕನ್ನಡಿಗರ ಹಕ್ಕು ಹಾಗೂ ಬೆಳಗಾವಿಯ ಕನ್ನಡ ಅಸ್ಮಿತೆಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಬೇಕು” ಎಂದು ಆಗ್ರಹಿಸಿದರು.
ಪಾಲಿಕೆಗೆ ಒಂದು ವಾರದ ಗಡುವು
“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು” ಎಂಬ ಸ್ಪಷ್ಟ ಠರಾವನ್ನು ಒಂದು ವಾರದೊಳಗೆ ಮಹಾನಗರ ಪಾಲಿಕೆ ಅಂಗೀಕರಿಸಬೇಕು. ಇಲ್ಲದಿದ್ದರೆ ಬರುವ ಬುಧವಾರ ಕರವೇ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಪರವಾಗಿ ನಿರ್ಣಯ ಕೈಗೊಳ್ಳಲು ವಿಫಲವಾದರೆ, ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ವಿಚಾರದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಆರ್. ಅಭಿಲಾಷ್ ತಿಳಿಸಿದರು.
ಈ ವೇಳೆ ಕರವೇ ಜಿಲ್ಲಾ ಗೌರವಾಧ್ಯಕ್ಷ ಅರುಣ್ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ, ನಗರಾಧ್ಯಕ್ಷ ರಾಜು ಕಲ್ಪತ್ರಿ, ಆಟೋ ಘಟಕದ ಅಧ್ಯಕ್ಷ ಸತ್ಯಪ್ಪ, ಝೋಯೆಲ್, ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷ ಸೂರಜ್ ಸೇರಿದಂತೆ ಅನೇಕ ಕರವೇ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.