ಅಥಣಿ: ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯ ಮಹತ್ವವನ್ನು ತಿಳಿಸುವುದರ ಜೊತೆಗೆ ಯುವಜನತೆಗೆ ಸಂವಿಧಾನದ ಹಕ್ಕುಗಳು, ಕರ್ತವ್ಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಬಲಪಡಿಸೋಣ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಪುರಸಭೆ ಆಡಳಿತ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದರು. ವಿಶ್ವಸಂಸ್ಥೆಯು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉತ್ತೇಜಿಸಲು ಸಪ್ಟೆಂಬರ್ 15 ಈ ದಿನವನ್ನು ಸ್ಥಾಪಿಸಿದೆ. ಪ್ರಜೆಗಳಿಂದಲೇ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುವ ಆಡಳಿತವೇ ಪ್ರಜಾಪ್ರಭುತ್ವವಾಗಿದೆ. ಸಂವಿಧಾನದ ಮಹತ್ವ, ಚುನಾವಣಾ ಜಾಗೃತಿ ಮತ್ತು ನಾಗರಿಕರ ಭಾಗವಹಿಸುವಿಕೆಯ ಕುರಿತು ಸಂದೇಶಗಳನ್ನು ನೀಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು, ಮತದಾನವು ಬರೀ ಹಕ್ಕು ಮಾತ್ರವಲ್ಲ, ಬದಲಾಗಿ ಅದೊಂದು ಹೊಣೆಗಾರಿಕೆಯೂ ಆಗಿದೆ. ರಾಜ್ಯ ಸರ್ಕಾರ ಈ ಬಾರಿ ಯುವ ಸಂಸತ್ತು ಸಭೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಚುನಾವಣೆ ಮತ್ತು ಮತದಾನದ ಹಕ್ಕು ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಶಿವಲೀಲಾ ಬೂಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಪುರಸಭೆಯ ಸದಸ್ಯರಾದ ರಾಜಶೇಖರ ಗುಡೋಡಗಿ, ಮಲ್ಲೇಶ ಹುದ್ದಾರ, ಮಲ್ಲಿಕಾರ್ಜುನ ಬೂಟಾಳಿ, ಸಯ್ಯದ್ ಅಮೀನ್ ಗದ್ಯಾಳ, ವಿಲನರಾಜ್ ಯಳಮಲ್ಲೇ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಸಮಾಜ ಕಲ್ಯಾಣ ಅಧಿಕಾರಿ ಪರುಶುರಾಮ ಪತ್ತಾರ, ತಾಲೂಕ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ನ್ಯಾಯವಾದಿ ಮಿತೇಶ್ ಪಟ್ಟಣ, ಶೇಖರ ಸೌದಾಗರ, ಶಿವಾನಂದ ಸೌದಾಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.