ಬಳ್ಳಾರಿ,ಸೆ.18: ಗ್ರಾಮೀಣ ಸಮುದಾಯಗಳಲ್ಲಿ ಉತ್ತಮ ನೈರ್ಮಲ್ಯ ಪದ್ಧತಿಗಳನ್ನು ರೂಢಿಸಿಕೊಳ್ಳಲು ಹಾಗೂ ಸ್ವಚ್ಛತೆಯನ್ನು ಜನಾಂದೋಲನವನ್ನಾಗಿ ರೂಪಿಸುವ ಉದ್ದೇಶದಿಂದ ರಾಷ್ಟçವ್ಯಾಪಿ ‘ಸ್ವಚ್ಛತೆಯೇ ಸೇವೆ-2026’ (ಸ್ವಚ್ಛತಾ ಹಿ ಸೇವಾ) ಅಭಿಯಾನವು ಸೆಪ್ಟೆಂಬರ್ 17 ರಿಂದ ಆರಂಭಗೊAಡಿದೆ.
ಈ ಅಭಿಯಾನವು ಮಹಾತ್ಮಾ ಗಾಂಧಿ ಜಯಂತಿ ಹಾಗೂ ‘ಸ್ವಚ್ಛ ಭಾರತ ದಿವಸ್' ಆದ ಅಕ್ಟೋಬರ್ 2 ರಂದು ಸಮಾರೋಪಗೊಳ್ಳಲಿದೆ. ಈ ವರ್ಷದ ಅಭಿಯಾನಕ್ಕೆ "ಸ್ವಚ್ಛತೆಯಲ್ಲಿ ಸಹಭಾಗಿತ್ವ – ಸ್ವಚ್ಛ ಭಾರತ, ವಿಕಸಿತ ಭಾರತ" ಎಂಬ ಧೇಯವಾಕ್ಯವನ್ನು ನೀಡಲಾಗಿದ್ದು, ಇದು ವಿಕಸಿತ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತದೆ.
ಅಭಿಯಾನದ ಉದ್ದೇಶ:-
ಸಾರ್ವಜನಿಕ ಸ್ಥಳಗಳು ಹಾಗೂ ನಿರ್ಲಕ್ಷಿತ ಕಸದ ತಾಣಗಳನ್ನು ಗುರುತಿಸಿ, ಸ್ವಚ್ಛಗೊಳಿಸಿ ಸುಂದರಗೊಳಿಸುವುದು. ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಶಾಲೆಗಳಲ್ಲಿ ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
ಅದೇರೀತಿಯಾಗಿ ಪೌರಕಾರ್ಮಿಕರು ಹಾಗೂ ನೈರ್ಮಲ್ಯ ಸಿಬ್ಬಂದಿಯ ಸುರಕ್ಷತೆ, ಆರೋಗ್ಯ ತಪಾಸಣೆ ಮತ್ತು ಅವರನ್ನು ಸನ್ಮಾನಿಸುವ ಕಾರ್ಯಕ್ರಮಗಳು. ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಉದ್ದೇಶವಾಗಿದೆ.
ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳು:-
ಘನತ್ಯಾಜ್ಯ ನಿರ್ವಹಣಾ ನಿಯಮಗಳು ಕುರಿತು ಜನರಿಗೆ ಮಾಹಿತಿ ನೀಡುವುದು ಹಾಗೂ ನಾಗರಿಕರನ್ನು ನೇರವಾಗಿ ತೊಡಗಿಸಿಕೊಳ್ಳುವುದು. ಕಸವನ್ನು ನಾಲ್ಕು ವಿಧಗಳಲ್ಲಿ ಮೂಲದಲ್ಲೇ ವಿಂಗಡಿಸುವುದು ಮತ್ತು ಸಾವಯವ ಕಾಂಪೋಸ್ಟಿAಗ್ ಪದ್ಧತಿಗೆ ಪ್ರೋತ್ಸಾಹ ನೀಡುವುದು. ಸ್ವಚ್ಛತೆಯನ್ನು ಜೀವನಶೈಲಿಯನ್ನಾಗಿಸಲು ಸ್ಥಳೀಯ ಹಾಗೂ ಪ್ರಾದೇಶಿಕ ಕ್ರೀಡಾ ಸ್ಪರ್ಧೆಗಳ ಮೂಲಕ ಸಂದೇಶ ಪ್ರಸಾರ ಮಾಡುವುದು.
ಮುಂಬರುವ ಹಬ್ಬ-ಹರಿದಿನಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜನರಲ್ಲಿ ಉತ್ತೇಜನ ಮೂಡಿಸುವುದು. ತಾಯಿಯ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದು ಸಸಿ ನೆಡುವ ಪರಿಸರ ಸಂರಕ್ಷಣಾ ಅಭಿಯಾನ ಮತ್ತು ಅಕ್ಟೋಬರ್ 1 ರಂದು ಜಿಲ್ಲೆಯಾದ್ಯಂತ "ಒಂದು ದಿನ, ಒಂದು ಗಂಟೆ, ಒಟ್ಟಾಗಿ" ಸಾಮೂಹಿಕ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೈಜೋಡಿಸುವಂತೆ ಜಿಲ್ಲಾ ಪಂಚಾಯತ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.