ಬಳ್ಳಾರಿ, ಸೆ.18: ನಗರದ ಕೊಳಗೇರಿ ಪ್ರದೇಶದ ನಿವಾಸಿಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಈಗಾಗಲೇ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಫಲಾನುಭವಿಗಳ ಹೆಸರಿನಲ್ಲಿ ನೋಂದಣಿ ಮಾಡಿಸಿ ಮಹಾನಗರ ಪಾಲಿಕೆಯಿಂದ ಫಾರಂ-2 ಇ-ಖಾತಾ ಮಾಡಿಕೊಡಬೇಕೆಂದು ಸರ್ಕಾರದ ಆದೇಶವಿದ್ದರೂ, ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಇದುವರೆಗೆ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಆಗ್ರಹಿದೆ.
ಈ ಕುರಿತು ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ನಂದಿಹಾಳ ನೇತೃತ್ವದಲ್ಲಿ ಸಂಸದ ತುಕಾರಾಮ್, ಜಿಲ್ಲಾಧಿಕಾರಿ ಹಾಗೂ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ಪಡೆದಿರುವ ಬಡ ಫಲಾನುಭವಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎರಡು ವರ್ಷಗಳು ಕಳೆದಿವೆ. ಆದರೂ ನೋಂದಣಿ ಹಾಗೂ ಮಹಾನಗರ ಪಾಲಿಕೆಯಲ್ಲಿ ಫಾರಂ-2 ಇ-ಖಾತಾ ಮಾಡಿಕೊಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಒಂದು ಇಲಾಖೆ ಮತ್ತೊಂದು ಇಲಾಖೆಯ ಮೇಲೆ ಜವಾಬ್ದಾರಿ ಹೊರಿಸುತ್ತಾ ಕಾಲಹರಣ ಮಾಡುತ್ತಿರುವುದರಿಂದ ಬಡ ಫಲಾನುಭವಿಗಳು ಸರ್ಕಾರದ ಸೌಲಭ್ಯವಿದ್ದರೂ ಅದನ್ನು ಪಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಲಾಗಿದೆ.
ಹೀಗಾಗಿ ಮಹಾನಗರ ಪಾಲಿಕೆ ಆಯುಕ್ತರು, ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಂಬಂಧಪಟ್ಟ ನೋಂದಣಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಹಕ್ಕುಪತ್ರಗಳ ನೋಂದಣಿ ಹಾಗೂ ಫಾರಂ-2 ಇ-ಖಾತಾ ಮಾಡಿಕೊಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಅಧಿಕಾರಿಗಳು ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸದೆ ಮತ್ತಷ್ಟು ಕಾಲಹರಣ ಮಾಡಿದರೆ ಸಂಬಂಧಪಟ್ಟ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ವೇದಿಕೆ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಸಿ. ಹನುಮೇಶ್ ಕಟ್ಟಿಮನಿ, ಹಿರಿಯ ಮುಖಂಡರಾದ ರಾಮಾಜಿನಿ, ಬಂಡೆಪ್ಪ, ಭಾಷಾ, ವೆಂಕಟೇಶ್ ಮೇಸ್ತ್ರಿ, ಶೇಖರ್ ಕುರುವಳ್ಳಿ, ಎರ್ರಿಸ್ವಾಮಿ ಛಲವಾದಿ, ನಾಗಭೂಷಣ ಮೇಸ್ತ್ರಿ, ಉಮೇಶ್ ಮೇಸ್ತ್ರಿ, ಸತ್ಯ ಛಲವಾದಿ ಸೇರಿದಂತೆ ಹಕ್ಕುಪತ್ರ ಪಡೆದ ಫಲಾನುಭವಿಗಳು ಉಪಸ್ಥಿತರಿದ್ದರು.