ತಾಳಿಕೋಟೆ, ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ವಿಜ್ಞಾನ ಶಿಕ್ಷಕ ರಾಜು ಜವಳಗೇರಿ, ಹಿಂದೂ ಧರ್ಮದ ವಾಸ್ತುಶಿಲ್ಪದ ದೇವರಾದ ಭಗವಾನ್ ವಿಶ್ವಕರ್ಮನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ ೧೭ರಂದು ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ. ವಿಶ್ವಕರ್ಮನನ್ನು ದೇವತೆಗಳ ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದ್ದು, ಕರಕುಶಲತೆ, ವಾಸ್ತುಶಿಲ್ಪ ಹಾಗೂ ಸೃಜನಶೀಲತೆಯ ಪ್ರತೀಕವಾಗಿ ಆರಾಧಿಸಲಾಗುತ್ತದೆ. ಸಾಮಾನ್ಯವಾಗಿ ಮನೆಗಳಿಗಿಂತ ಕೆಲಸದ ಸ್ಥಳಗಳು, ವ್ಯಾಪಾರ ಸಂಸ್ಥೆಗಳು, ಕಾರ್ಖಾನೆಗಳು, ಗಿರಣಿಗಳು ಹಾಗೂ ಕಚೇರಿಗಳಲ್ಲಿ ವಿಶ್ವಕರ್ಮನಿಗೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಭಗವಾನ್ ವಿಶ್ವಕರ್ಮನ ಜೀವನ ಹಾಗೂ ಸೃಜನಶೀಲತೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಂಡು, ಕೌಶಲ್ಯ ಮತ್ತು ಪರಿಶ್ರಮಕ್ಕೆ ಗೌರವ ನೀಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ, ಮುಖ್ಯೋಪಾಧ್ಯಾಯ ಸಂತೋಷ ಪವಾರ, ಶಾಲೆಯ ಸರ್ವ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.