*ಬಳ್ಳಾರಿ, ಆ.29 : ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರ ಇತ್ತೀಚಿನ ಹೇಳಿಕೆಗಳಿಗೆ ತೀವ್ರ ತಿರುಗೇಟು ನೀಡಿರುವ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ನಾಗೇಂದ್ರ ಅವರನ್ನು ‘ಕಲಿಯುಗದ ಶಂಬುಕ’ ಎಂದು ಸಂಬೋಧಿಸಿ ವಾಗ್ದಾಳಿ ನಡೆಸಿದರು.
ನಗರದ ಸಿರುಗುಪ್ಪ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣದ ಆರೋಪಗಳ ಕುರಿತು ನಾಗೇಂದ್ರ ಅವರು ದಾಖಲೆಗಳೊಂದಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ನಿಗಮದ ಹಣ ವರ್ಗಾವಣೆ ಹಾಗೂ ವಿವಿಧ ಖಾತೆಗಳಲ್ಲಿನ ವಹಿವಾಟಿನ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿಯಲ್ಲಿ ತಮ್ಮ ಜನಬೆಂಬಲದ ಕುರಿತು ನಾಗೇಂದ್ರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರೆಡ್ಡಿ, “ನಿಜವಾಗಿಯೂ ಜನಬೆಂಬಲವಿದ್ದರೆ ಮೈದಾನಕ್ಕೆ ಬನ್ನಿ, ಜನರ ತೀರ್ಪು ಎದುರಿಸೋಣ” ಎಂದು ಬಹಿರಂಗ ಸವಾಲು ಹಾಕಿದರು.
ಅಖಂಡ ಬಳ್ಳಾರಿ ಜಿಲ್ಲೆಯ 10 ಶಾಸಕರು ಹಾಗೂ ಒಬ್ಬ ಸಂಸದ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ; ನಾವು ಚುನಾವಣೆಗೆ ಸಿದ್ಧ ಎಂದು ಘೋಷಿಸಿದರು. ಮಾತಿನ ರಾಜಕೀಯಕ್ಕಿಂತ ಜನಾದೇಶವೇ ಅಂತಿಮ ಎಂದು ಹೇಳಿದರು.
ಅನ್ನಪೂರ್ಣ ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡಿದರೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ ರೆಡ್ಡಿ, ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.