ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳಲ್ಲಿ ಒಬ್ಬೊಬ್ಬನ ಕತೆಯೂ ಒಂದೊಂದು ಬಗೆಯಾಗಿದ್ದು, ತನ್ನ ಸ್ಥಿತಿಯಿಂದಾಗಿ ಹತಾಶರಾಗಿದ್ದಾರೆ. ಪ್ರಕರಣದಲ್ಲಿ ಎ1 ಆರೋಪಿ ಪವಿತ್ರ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ ಯಾರಿಗೂ ಜಾಮೀನು ದೊರೆತಿಲ್ಲ. ಹೀಗಾಗಿ ಇನ್ನುಳಿದವರಿಗೂ ಜಾಮೀನು ಸಿಗುವ ಸಾಧ್ಯತೆ ಕ್ಷೀಣವಾಗಿದೆ.
ಸದ್ಯ ಸುರಕ್ಷತೆಯ ಕಾರಣದ ಪರಪ್ಪನ ಅಗ್ರಹಾರದಿಂದ ತುಮಕೂರು ಜೈಲಿಗೆ ಸ್ಥಳಾಂತರಿಸಿರುವ ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ಆರೋಪಿಗಳಾದ ರವಿಶಂಕರ್, ನಿಖಿಲ್, ಕಾರ್ತಿಕ್, ಕೇಶವ ಎಲ್ಲರೂ ಒಂದೇ ಬ್ಯಾರಕ್‌ನಲ್ಲಿದ್ದಾರೆ. ಪ್ರಕರಣದ ಹೊಣೆ ನಿನ್ನದು ನಿನ್ನದು ಎಂದು ನಾಲ್ವರೂ ಬೈದಾಡಿಕೊಂಡಿದ್ದಾರೆ.
ನಿನ್ನ ಮಾತು ಕೇಳಿ ನಾನೂ ಸಿಕ್ಹಾಕಿಕೊಂಡೆ ಅಂತ ಪರಸ್ಪರ ನಿಂದಿಸಿಕೊಂಡಿದ್ದಾರೆ. ರಾಘವೇಂದ್ರನ ಮಾತು ಕೇಳಿ ನಾವು ಸಿಲುಕಿಕೊಂಡೆವು. ನಮಗೆ ಜೈಲೇ ಗಟ್ಟಿಯಾಗುತ್ತೆ. ಯಾರೂ ಸಹಾಯ ಮಾಡುವುದಿಲ್ಲ ಎಂದು ಗೋಳಾಡಿಕೊಂಡಿದ್ದಾರೆ. ದರ್ಶನ್‌ಗೆ ಜಾಮೀನು ಅರ್ಜಿಯನ್ನಾದರೂ ಸಲ್ಲಿಸಲಾಗಿತ್ತು. ಆದರೆ ಇವರಿಗೆ ಜಾಮೀನು ನೀಡುವುದಕ್ಕೂ ಯಾರೂ ಮುಂದೆ ಬಂದಿಲ್ಲ. ದರ್ಶನ್ ಮನೆಯವರು ಹಾಗೂ ನ್ಯಾಯವಾದಿಗಳ ತಂಡದ ಕಡೆಯಿಂದಲೂ ಸಹಾಯದ ಭರವಸೆ ದೊರೆತಿಲ್ಲ ಎನ್ನಲಾಗಿದೆ.
ಈ ಪ್ರಕರಣದ ಬಳಿಕ ನಮ್ಮೆಲ್ಲರ ಜೀವನ ಸೆಟ್ಲ್ ಆಗುತ್ತೆ ಡೋಂಟ್ ವರಿ ಎಂದು ಇನ್ನೊಬ್ಬ ಆರೋಪಿ ರಾಘವೇಂದ್ರ ಹಣದ ಆಮಿಷ ತೋರಿಸಿದ್ದನಂತೆ. ಕೊಲೆ ಬಳಿಕ ಮೃತದೇಹ ಬಿಸಾಡಿದ್ದು, ಸ್ಟೇಷನ್‌ಗೆ ಹೋಗಿ ಸರೆಂಡರ್ ಆಗಿದ್ದು ಎಲ್ಲವನ್ನೂ ಈ ಆರೋಪಿಗಳು ರಾಘವೇಂದ್ರ ಹೇಳಿದಂತೆ ಮಾಡಿದ್ದಾರೆ. ಆದರೆ ಪೊಲೀಸರ ತನಿಖೆಯ ಬಿಗಿ ಹೆಚ್ಚಾಗುತ್ತ ಹೋದಂತೆ ಎಲ್ಲವನ್ನೂ ಹೇಳಿಬಿಟ್ಟಿದ್ದಾರೆ.