ತಾಳಿಕೋಟೆ : ಡೋಣಿ ಶ್ರೀ ಹನುಮಾನ್ ಮಂದಿರದ(ಶ್ರೀ ರಂಗರಾವ್ ಮಹಾರಾಜರ ಮಠದ ಹತ್ತಿರ)ಹತ್ತಿರವಿರುವ ಕೋಟೆಗೋಡೆಯ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೋತ್ಸವವು ಪ್ರತೀ ವರ್ಷದಂತೆ ಈ ಸಲ ಇದೇ ದಿ. ೨೭ ರಂದು ವಿಜೃಂಭಣೆಯಿಂದ ಜರುಗಲಿದೆ.
ದಿ. ವೇ|| ಪುರುಷೋತ್ತಮಾಚಾರ್ಯ ಗ್ರಾಂ ಪುರೋಹಿತ ಅವರ ಸಹೋದರರಾದ ಶ್ರೀಧರ ಗ್ರಾಂ ಪುರೋಹಿತ ಹಾಗೂ ಶಿಷ್ಯಂದಿರಿಂದ ನೆರವೇರಲಿರುವ ಈ ಜಾತ್ರೋತ್ಸವ ದಿನದಂದು ಬೆಳಿಗ್ಗೆ ೮ ಘಂಟೆಗೆ ಶ್ರೀದೇವಿಗೆ ಮಹಾಭಿಷೇಕ, ಪುಷ್ಪಾರ್ಚನೆ, ಅಲಂಕಾರ ಮಹಾಮಂಗಳಾರತಿ ಜರುಗಲಿದೆ ಅಲ್ಲದೇ ೮ ಘಂಟೆಯಿಂದ ಸುಮಂಗಲೆಯರಿಂದ ಗಂಗಸ್ಥಳವು ಪ್ರಮುಖ ಬೀದಿಗಳಲ್ಲಿ ಹಾಯ್ದು ಪುನಃ ಮಂದಿರ ತಲುಪಲಿದೆ. ನಂತರ ಹೋಮ ಹವನ ಕಾರ್ಯಕ್ರಮಗಳು ಮಂದಿರದ ಆವರಣದಲ್ಲಿ ಜರುಗುವವು. ಮದ್ಯಾಹ್ನ ೧ ಘಂಟೆಯಿಂದ ೩ ಘಂಟೆಗೆ ತೀರ್ಥ ಪ್ರಸಾದ ಜರುಗುವದು.
ಸಾಯಂಕಾಲ ೬ ಘಂಟೆಗೆ ಶ್ರೀ ಮಹಾಲಕ್ಷ್ಮೀ ಹಾಗೂ ಗಾಯತ್ರಿ ಭಜನಾ ಮಂಡಳಿಯವರಿಂದ ಶ್ರೀ ಕೃಷ್ಣ ಧ್ಯಾನ, ಮಂತ್ರಜಪ ಹಾಗೂ ಲಕ್ಷ್ಮೀ ಸೋಬಾನ ಹಾಡುಗಳು ಜರುಗುವದಲ್ಲದೇ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವದು.
ಈ ಕಾರ್ಯಕ್ರಮದಲ್ಲಿ ಸಮಸ್ತ ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕೋಟೆಗೋಡೆ ಮಹಾಲಕ್ಷ್ಮೀ ದೇವಿ ಉತ್ಸವ ಸಮೀತಿ ಪ್ರಕಟಣೆ ಮೂಲಕ ತಿಳಿಸಿದೆ.