ತಾಳಿಕೋಟೆ, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಅರ್ಹ ಆಸ್ತಿಗಳಿಗೆ ಇ-ಖಾತಾ ವಿತರಿಸುವ ಉದ್ದೇಶದಿಂದ ವಿಶೇಷ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅರ್ಹ ಆಸ್ತಿ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ ತಿಳಿಸಿದ್ದಾರೆ.
ಮಂಗಳವಾರರಂದು ಪಟ್ಟಣದ ರಾಜವಾಡೆಯಲ್ಲಿ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪೌರಾಡಳಿತ-೨ ಮತ್ತು ಮಂಡಳ ವಿಭಾಗದ ಅಧೀನ ಕಾರ್ಯದರ್ಶಿಗಳ ಆದೇಶ ಸಂಖ್ಯೆ ನಅಇ:೨೫೬/ಜಿ.ಇ.ಎಂ.೨೦೨೬(ಇ), ದಿನಾಂಕ ೧೦-೦೯-೨೦೨೬ರ ಆದೇಶದನ್ವಯ ಸರ್ಕಾರವು ’ಭೂ-ಗ್ಯಾರಂಟಿ’ ಯೋಜನೆ ಜಾರಿಗೊಳಿಸಿದೆ. ಇದರಡಿ ಬಾಕಿ ಇರುವ ಅರ್ಹ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದ ಮೂಲಕ ಅಭಿಯಾನದ ರೂಪದಲ್ಲಿ ಇ-ಖಾತಾ ನೀಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಳಿಕೋಟೆ ಪುರಸಭೆ ವ್ಯಾಪ್ತಿಯಲ್ಲಿಯೂ ವಿಶೇಷ ಅಭಿಯಾನ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಸಿಟಿಎಸ್ ಆಸ್ತಿಗಳಿಗೆ ಅಗತ್ಯ ದಾಖಲೆಗಳು:
ಅರ್ಜಿ ನಮೂನೆ, ಸಿಟಿಎಸ್ ಉತಾರೆ, ಸಿಟಿಎಸ್ ನಕ್ಷೆ, ಆಸ್ತಿ ಮಾಲೀಕರ ಭಾವಚಿತ್ರ, ಋಣಭಾರ ಪ್ರಮಾಣಪತ್ರ (ಇಸಿ ನಮೂನೆ-೧೫), ಮನೆಯ ಜಿಪಿಎಸ್ ಫೋಟೋ, ಮತದಾರರ ಗುರುತಿನ ಚೀಟಿ ಅಥವಾ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್, ೨೦೨೬-೨೭ನೇ ಸಾಲಿನ ಎಸ್‌ಎಎಸ್, ನೀರಿನ ಕರ ಪಾವತಿ ದಾಖಲೆ ಹಾಗೂ ಕಟ್ಟಡ ಪರವಾನಗಿ ಅಥವಾ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ ಸಲ್ಲಿಸಬೇಕು.
ಬಿನ್‌ಶೇತ್ಕಿ ಆಸ್ತಿಗಳಿಗೆ ಅಗತ್ಯ ದಾಖಲೆಗಳು:
ಅರ್ಜಿ ನಮೂನೆ, ಎನ್.ಎ. ಆದೇಶದ ಪ್ರತಿ, ಕೆಜೆಪಿ ಮತ್ತು ನಕ್ಷೆ, ಖರೀದಿ ಬಾಂಡ್, ಋಣಭಾರ ಪ್ರಮಾಣಪತ್ರ (ಇಸಿ ನಮೂನೆ-೧೫), ಮನೆ ಅಥವಾ ಖಾಲಿ ಜಾಗದ ಜಿಪಿಎಸ್ ಫೋಟೋ, ಮತದಾರರ ಗುರುತಿನ ಚೀಟಿ ಅಥವಾ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್, ೨೦೨೬-೨೭ನೇ ಸಾಲಿನ ಎಸ್‌ಎಎಸ್, ನೀರಿನ ಕರ ಪಾವತಿ ದಾಖಲೆ ಹಾಗೂ ಕಟ್ಟಡ ಪರವಾನಗಿ ಅಥವಾ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ.
ಪಟ್ಟಣದ ಅರ್ಹ ಆಸ್ತಿ ಮಾಲೀಕರು ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಪುರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿ ತಮ್ಮ ಆಸ್ತಿಗಳಿಗೆ ಇ-ಖಾತಾ ಮಾಡಿಸಿಕೊಳ್ಳಬೇಕು. ಕೊನೆಯ ಕ್ಷಣದವರೆಗೆ ಕಾಯದೆ ಅಭಿಯಾನದ ಅವಧಿಯಲ್ಲಿಯೇ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಸರ್ಕಾರದ ಯೋಜನೆಯ ಪ್ರಯೋಜನ ಪಡೆಯುವಂತೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕ ಇಂಜಗನೇರಿ, ಕಂದಾಯ ವಿಭಾಗದ ಆರ್.ಒ. ಸುರೇಶ ಅಮರಣ್ಣವರ, ಎಸ್.ಐ. ಪಾಟೀಲ, ಶ್ರೀಪಾದ ಜೋಶಿ, ಪ್ರಭು ನಾಲತವಾಡ, ಜಾನ್ವೇಕರ, ಹಾಗೂ ಬಡಾವಣೆಯ ನಾಗರಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.