ಬೀಳಗಿ: ಜನಪದ ಎನ್ನುವುದು ಪರಂಪರೆ,ಸಂಪ್ರದಾಯಗಳ ಸಂಪತ್ತು,ಇದರಿಂದ ಸಂಸ್ಕಾರ, ಸಂಸ್ಕೃತಿಗಳ ಅರಿವು ಹೆಚ್ಚಾಗಲಿದೆ, ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಸಾಮಾಜಿಕ ಪಿಡುಗುಗಳನ್ನು ತಡೆಯಲು ಎಲ್ಲರೂ ಜಾಗೃತರಾಗಬೇಕು. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸದೆ ಕಾನೂನು ನಿಯಮಗಳನ್ನು ಪಾಲಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ದಿವಾನಿ ನ್ಯಾಯಾಧೀಶರಾದ ಪುಷ್ಪ ಜೋಗೋಜಿ ಹೇಳಿದರು.
ತಾಲ್ಲೂಕಿನ ನಾಗರಾಳ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾನೂನು ಅರಿವು ನೆರವು ಹಾಗೂ ಗೌರಿ ಹಾಡುಗಳ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಿ ಜವಾಬ್ದಾರಿಯುತ ನಾಗರಿಕರಾಗಿ ಬದುಕಬೇಕು. ಜನಪದ ಸಂಸ್ಕೃತಿ ಇನ್ನೂ ಜೀವಂತವಾಗಿದ್ದರೆ ಅದಕ್ಕೆ ಇಂತಹ ಗ್ರಾಮೀಣ ಪ್ರದೇಶಗಳ ಕೊಡುಗೆ ಮಹತ್ವದ್ದಾಗಿದೆ,ತಂದೆ ತಾಯಿ,ಗುರು ಹಿರಿಯರು ಮತ್ತು ಸಂಬಂಧಗಳು ಗಟ್ಟಿಯಾಗಲಿವೆ ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಲೂತಿ ಮಾತನಾಡಿ, ಸಕ್ಕರೆ ಗೊಂಬೆಯು ಸಿಹಿತನ, ಪ್ರಕಾಶಮಾನತೆ ಹಾಗೂ ಜ್ಞಾನದ ಸಂಕೇತವಾಗಿದೆ. ಜನಪದ ಸಂಸ್ಕೃತಿಯ ಶ್ರೀಮಂತಿಕೆ ಅದರ ಹಿಂದಿರುವ ಸಾಂಸ್ಕೃತಿಕ ಮೌಲ್ಯಗಳು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿವೆ ಎಂದರು.
ಬಾಗಲಕೋಟೆ ಸರ್ಕಾರಿ ಪದವಿ ಪೂರ್ವ
ಕಾಲೇಜಿನ ಉಪನ್ಯಾಸಕ ಚಂದ್ರಶೇಖರ ಕಾಳನ್ನವರ ಪ್ರಸ್ತಾವಿಕವಾಗಿ ಮಾತನಾಡಿ, ನೆಲದ ಸಂಸ್ಕೃತಿ ಮತ್ತು ಗ್ರಾಮೀಣ ಪರಂಪರೆ ಜೀವಂತವಾಗಿರಬೇಕಾದರೆ ಗೌರಿಹಬ್ಬದಂತಹ ಸಮಾರಂಭಗಳ ಆಯೋಜಿಸುವ ಮೂಲಕ ಹೊಸ ತಲೆಮಾರಿಗೆ ನಮ್ಮ ಸಂಪ್ರದಾಯಗಳ ಪರಿಚಯ ಮಾಡಿಕೊಡುವುದರೊಂದಿಗೆ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುತ್ತವೆ ಎಂದು ಹೇಳಿದರು.
ಪ್ಯಾನಲ್ ವಕೀಲರಾದ ಎಸ್.ಜಿ. ವಸ್ತ್ರದ ಮಾತನಾಡಿ, ದುಶ್ಚಟಗಳಿಂದ ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ ಕುಟುಂಬದ ನೆಮ್ಮದಿ ಮತ್ತು ಸಾಮಾಜಿಕ ಸ್ವಾಸ್ಥ್ಯವೂ ಹಾಳಾಗುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ವ್ಯಸನಗಳಿಂದ ದೂರವಿದ್ದು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಶಿಕ್ಷಕರಾದ ಸುಮಾ ಸೋಮನಕಟ್ಟಿ, ಮಲ್ಲಮ್ಮ ಸುತಗುಂಡಿ ಹಾಗೂ ಶ್ರೀದೇವಿ ಮುಂಡಗನೂರ ಮಾತನಾಡಿದರು.
ಕಾನೂನಿನ ಅರಿವು, ಸಾಮಾಜಿಕ ಹೊಣೆಗಾರಿಕೆ ಮತ್ತು ಜನಪದ ಸಂಸ್ಕೃತಿಯ ಮಹತ್ವವನ್ನು ಒಂದೇ ವೇದಿಕೆಯಲ್ಲಿ ಸಾರಿದ ಕಾರ್ಯಕ್ರಮವು ಪರಂಪರೆಯ ಸಂರಕ್ಷಣೆಯೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಂದೇಶ ನೀಡಿತು.
ದಿಗಂಬರೇಶ್ವರ ಮಠದ ನಿಂಗಪ್ಪಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಜಯಲಕ್ಷ್ಮಿ ಕುರ್ತುಕೋಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಬೀಳಗಿ, ಸರ್ವಮಂಗಳಅ ಕೆರೂರ, ಅಭಿಲಾಷಾ ಪಾಟೀಲ, ಲಕ್ಷ್ಮಿ ತೆಕ್ಕಣ್ಣವರ, ಹುಲಿಗೆಮ್ಮ ಮಾಳಗೊಂಡ, ಪ್ರಮೀಳಾ ಘೋರ್ಪಡೆ, ಮಂಜುನಾಥ ಬಡಿಗೇರ ಇದ್ದರು.
ಶೇಖರ ಗೊಳಸಂಗಿ ಸ್ವಾಗತಿಸಿದರು ಅವಿನಾಶ ಜತ್ತಿ ನಿರೂಪಿಸಿದರು.
೨೫ಪೋಟೋ೧: ಕಾನೂನು ಅರಿವು ನೆರವು ಹಾಗೂ ಗೌರಿ ಹಾಡುಗಳ ಸಂಭ್ರಮ ಸಮಾರಂಭವನ್ನು ದಿವಾಣಿ ನ್ಯಾಯಾಧೀಶರಾದ ಪುಷ್ಪಾ ಜೋಗೋಜಿ ಕರಡಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.