ಹೊಸಪೇಟೆ : . ಭಾರತೀಯ ಜನತಾ ಪಕ್ಷದ ಬಿ ನಾಗೇಂದ್ರರವರ ವಿರುದ್ಧವಾಗಿ ಅನಿರ್ದಿಷ್ಟಕಾಲ ಹೋರಾಟವು ಮೂರನೇ ದಿನಕ್ಕೆ ಕಾಲಿರಿಸಿದೆ.
ಇಂದು ಎಸ್ ಟಿ ಮೋರ್ಚಾ, ಮಹಿಳಾ ಮೋರ್ಚ, ಅಲ್ಪಸಂಖ್ಯಾತರ ಮೋರ್ಚ, ಹಾಗೂ ರೈತ ಮೋರ್ಚಾದ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದಾರೆ.ಆರಂಭದಲ್ಲಿ ತಿಪಟೂರು ಕ್ಷೇತ್ರದ ಬಿಜೆಪಿಯ ಮಾಜಿ ಶಿಕ್ಷಣ ಸಚಿವರಾಗಿದ್ದ ಬಿ ಸಿ ನಾಗೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸಿದರು..
ಮಹಿಳಾ ಮೋರ್ಚಾದ ಅಧ್ಯಕ ಮೀರಾಬಾಯಿ ಮಾತನಾಡಿ " ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಮಹಿಳೆಯರಿಗೆ ಯಾವ ಸ್ಥಾನಮಾನಗಳು ಇಲ್ಲ. ಕಾಂಗ್ರೆಸ್ ಸರ್ಕಾರವು ಮಹಿಳಾ ಬಿಲ್ ಪಾಸ್ ಮಾಡದೆ ತಡೆಯೊಡ್ಡಿತ್ತು.. ಕಳೆದೆರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣವು ರಾಜ್ಯದ ಮಹಿಳೆಯರಿಗೆ ಸಿಕ್ಕಿಲ್ಲ. ಈ ಹಿಂದೆ ಇದರ ಬಗ್ಗೆಯೂ ಸಹ ಹೋರಾಟಗಳು ನಡೆದಿದ್ದವು.
ಬಿ ನಾಗೇಂದ್ರರವರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಹಗರಣವನ್ನು ಖುದ್ದಾಗಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರೇ ಒಪ್ಪಿಕೊಂಡಿರುತ್ತಾರೆ. ಇಂತಹ ಭ್ರಷ್ಟರನ್ನು ಸಂಪುಟಕ್ಕೆ ಸೇರಿಸಿಕೊಂಡು ವಾಲ್ಮೀಕಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಈ ದಿನ ನಾವು ನೂರು ಮಂದಿ ಮಹಿಳೆಯರು ಈ ಹೋರಾಟಕ್ಕೆ ಬಂದಿದ್ದೇವೆ. ನಾಗೇಂದ್ರ ಅವರು ರಾಜೀನಾಮೆ ಕೊಡದಿದ್ದರೆ ಪ್ರತಿ ತಾಲೂಕಿನಲ್ಲಿ ಮೂರು ಸಾವಿರ ಮಹಿಳೆಯನ್ನು ಕರೆತಂದು ಹೋರಾಟ ನಡೆಸುತ್ತೇವೆ" ಎಂದು ಎಚ್ಚರಿಸಿದರು.
ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಮಂಜುನಾಥ್ ಜೈನ'ರವರು ಮಾತನಾಡುತ್ತಾ
" ಬಿ ನಾಗೇಂದ್ರ ಅವರು ಆರೋಪಿತ ವ್ಯಕ್ತಿ. ಇವರನ್ನು ಸಂಪುಟದಲ್ಲಿ ಸೇರಿಸಬಾರದು. ಇದು ಭ್ರಷ್ಟಾಚಾರಕ್ಕೆ ಕುಮಕ್ಕು ಕೊಟ್ಟಂತೆ ಆಗುತ್ತದೆ. ಡಿಕೆ ಶಿವಕುಮಾರ್ ಅವರು ತಕ್ಷಣವೇ ನಾಗೇಂದ್ರರವರನ್ನು ಸಂಪುಟದಿಂದ ವಜಾ ಮಾಡಬೇಕು. ಈಗ ಎಲ್ಲರೂ ಶಾಂತಿ ಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲೆಯಿಂದ
ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ ಎಂದರು.
ಮೀರಾಬಾಯಿ ಯವರು "ಸಿಂಹದಂತೆ ಸಿಡಿದು ಬನ್ನಿ ಹುಲಿಯಂತೆ ಜಿಗಿದು ಬನ್ನಿ" ಸುಶ್ರಾವ್ಯವಾಗಿ ಕ್ರಾಂತಿ ಗೀತೆಯನ್ನು ಹಾಡಿದರು. ಅದಕ್ಕೆ ಇತರ ಎಲ್ಲ ಕಾರ್ಯಕರ್ತರು ದನಿಗೂಡಿಸಿದರು. ಪ್ರತಿಯೊಬ್ಬ ಮಹಿಳೆಯರು ತಮಗೆ ಬಂದ ಭಾವಗೀತೆ, ಭಕ್ತಿ ಗೀತೆ, ಜನಪದ ಗೀತೆ, ಲಾವಣಿ ಪದಗಳನ್ನು ಹಾಡಿ ಈ ದಿನದ ಹೋರಾಟವನ್ನು ವೈವಿಧ್ಯಮಯಗೊಳಿಸಿದರು. ಹೆಣ್ಣು ಬರೀ ಮನೆ ಕೆಲಸ, ಕುಟುಂಬ ನಿರ್ವಹಣೆ ಅಷ್ಟಕ್ಕೆ ಸೀಮಿತವಲ್ಲದೆ, ಇಂತಹ ಹೋರಾಟಗಳಲ್ಲಿ ಭಾಗವಹಿಸಿ ತಮ್ಮ ಕಲಾ ಕೌಶಲ್ಯವನ್ನು ಸಹ ಮೆರೆವರು ಎಂಬುದನ್ನು ಸಾಬೀತುಪಡಿಸಿ ಹೆಣ್ಮಕ್ಳೆ ಸ್ಟ್ರಾಂಗು ಗುರು ಎಂಬುದನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಂಜೀವ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಯಾದ ಕೆ ಎಸ್ ರಾಘವೇಂದ್ರ, ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ, ಜಿಲ್ಲೆ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಜಗದೀಶ್ ಕಮಟಗಿ, ರೈತ ಮೋರ್ಚಾ ಅಧ್ಯಕ್ಷರಾದ ರೇವಣ್ಣ, ಜಿಲ್ಲಾ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿಗಳಾದ ಅರ್ಪಿತ ಗೌಡ, ಗೀತಾ, ನಿರ್ಮಲ, ಶೃತಿ, ಜ್ಯೋತಿ, ಸೌಮ್ಯ, ರೇಣುಕಾ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಉಮಾದೇವಿ, ಪೂರ್ಣಿಮಾ, ವಿಜಯಲಕ್ಷ್ಮಿ, ಲಲಿತ, ಜಯಶ್ರೀ, ಮುಂತಾದವರು ಉಪಸ್ಥಿತರಿದ್ದರು.