LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಕಾಲುವೆಗೆ ನೀರು ಹರಿಸಿ, ಬೆಳೆ ಉಳಿಸಿ: ಅಧಿಕಾರಿಗಳ ವಿರುದ್ಧ ಚವನಭಾವಿ ರೈತರ ಆಕ್ರೋಶ

ಮುದ್ದೇಬಿಹಾಳ:ಹೊಲದಲ್ಲಿನ ಬೆಳೆಗಳು ಒಣಗಿ ಹೋಗಿವೆ. ದನ-ಕರುಗಳಿಗೆ ನೀರಿಲ್ಲ, ಮನುಷ್ಯರಿಗೆ ಕುಡಿಯಲೂ ನೀರಿಲ್ಲ. ಹೊಲಕ್ಕೆ ಹೋದಾಗ ಒಣಗಿದ ಬೆಳೆಗಳನ್ನು ನೋಡಿದರೆ ಕಣ್ಣೀರು ಬರುತ್ತದೆ. ಸಾಲ-ಶೂಲ ಮಾಡಿ ಒಂದು ಲಕ್ಷ ರೂಪಾಯಿ ಹಾಕಿ ಬೆಳೆ ಬೆಳೆದಿದ್ದೇವೆ. ಅಧಿಕಾರಿಗಳು ಕಾಲುವೆಗೆ ನೀರು ಬಿಡಲು ಸಿದ್ಧರಿಲ್ಲ. ಹೀಗೆ ಬದುಕುವುದಕ್ಕಿಂತ ಅಧಿಕಾರಿಗಳೇ ವಿಷ ಕೊಟ್ಟರೆ ಕುಡಿದು ಸಾಯುತ್ತೇವೆ ಎಂದು ರೈತ ಸಿದ್ದಪ್ಪ ಮಾದರ ಅವರು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ನೀರಿಲ್ಲದೆ ಬೆಳೆಗಳು ಒಣಗಿ ಹೋಗಿದ್ದು, ಸಾಲದ ಹೊರೆ ಹೆಚ್ಚಾಗಿ ರೈತರು ಕಣ್ಣೀರಿನಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಎ.ಎಲ್.ಬಿ.ಸಿ. ಕಾಲುವೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಿ ಬೆಳೆಗಳನ್ನು ಉಳಿಸುವ ಜತೆಗೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪಟ್ಟಣದ ಕೃಷ್ಣಾ ಭಾಗ್ಯ ಜಲ ನಿಗಮದ ಎ.ಎಲ್.ಬಿ.ಸಿ. ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಬುಧವಾರ ತೆರಳಿದ ಚವನಭಾವಿ ಗ್ರಾಮದ ರೈತರು, ಕೆಬಿಜೆಎನ್ಎಲ್ ಎಂಜಿನಿಯರ್‌ಗಳಾದ ಬಿ.ಎಂ. ಸಾತಿಹಾಳ ಹಾಗೂ ಎಸ್.ಕೆ. ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು.
ಒಂದೆಡೆ ಬರಗಾಲ,ಮಳೆ ಕೈಕೊಟ್ಟಿರುವುದರಿಂದ ಜಮೀನಿನಲ್ಲಿ ಬೆಳೆದಿರುವ ತೊಗರಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಬೆಳೆಗಾಗಿ ಸಾವಿರಾರು ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಇದೀಗ ನೀರಿಲ್ಲದೆ ಬೆಳೆ ಕೈಕೊಟ್ಟರೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ ಎಂದು ಸಿದ್ದಪ್ಪ ಮಾದರ ಅಳಲು ತೋಡಿಕೊಂಡರು.
‘ಮಳೆ ಬಂದ ಮೇಲೆ ನೀರು ಬಿಟ್ಟರೆ ಏನು ಪ್ರಯೋಜನ?’
ತಾಲೂಕಿನ ಚವನಭಾವಿ ಗ್ರಾಮದ ರೈತರು ಹಲವು ವರ್ಷಗಳಿಂದ ಅಲಮಟ್ಟಿ ಜಲಾಶಯದ ಚಿಮ್ಮಲಗಿ ಎ.ಎಲ್.ಬಿ.ಸಿ. ಎಡದಂಡೆ ಕಾಲುವೆಯ ಡಿಸ್ಟ್ರಿಬ್ಯೂಟರ್-40ನೇ ಕಾಲುವೆಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂಬ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ದೂರಿದರು.
ಕಾಲುವೆ ಮುಖದಿಂದ ಡಿಸ್ಟ್ರಿಬ್ಯೂಟರ್-40ನೇ ಕಾಲುವೆಯ ಟೇಲ್ ಎಂಡ್‌ವರೆಗೆ ಅಗತ್ಯ ಪ್ರಮಾಣದ ನೀರು ತಲುಪದ ಕಾರಣ ಚವನಭಾವಿ ಗ್ರಾಮದ ರೈತರಿಗೆ ನೀರಾವರಿ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಉಳಿಸುವ ಈ ಸಮಯದಲ್ಲಿ ನೀರು ಹರಿಸದೆ ಮಳೆಗಾಲದಲ್ಲಿ ನೀರು ಬಿಟ್ಟರೆ ಅದರಿಂದ ರೈತರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಕಾಲುವೆಯ ಹೂಳು ಇಷ್ಟುದಿನ ಏಕೆ ತೆಗೆಯಲಿಲ್ಲ?
ಪ್ರತಿ ವರ್ಷ ಕಾಲುವೆ ಸ್ವಚ್ಛತೆ, ಹೂಳು ತೆಗೆಯುವುದು, ಕಳೆ ತೆಗೆಯುವುದು ಹಾಗೂ ನಿರ್ವಹಣಾ ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರದ ಅನುದಾನ ಖರ್ಚು ಮಾಡಲಾಗುತ್ತಿದೆ. ಆದರೆ ಕಾಲುವೆಯಲ್ಲಿ ಹೂಳು ಹಾಗೂ ಕಳೆ ಇದ್ದು ನೀರು ಸಮರ್ಪಕವಾಗಿ ಹರಿಯದಿರುವುದೇಕೆ ಎಂದು ರೈತರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕಳೆದ ಐದು ವರ್ಷಗಳಲ್ಲಿ ಡಿಸ್ಟ್ರಿಬ್ಯೂಟರ್-40ನೇ ಕಾಲುವೆಯ ಸ್ವಚ್ಛತೆ, ಡಿಸಿಲ್ಟಿಂಗ್, ದುರಸ್ತಿ ಹಾಗೂ ನಿರ್ವಹಣೆಗೆ ಮಂಜೂರಾದ ಕಾಮಗಾರಿಗಳ ಅಂದಾಜು, ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ, ಟೆಂಡರ್, ವರ್ಕ್ ಆರ್ಡರ್, ಎಂ.ಬಿ., ಬಿಲ್ ಮತ್ತು ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕು. ದಾಖಲೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ತೋರಿಸಿದ್ದರೆ, ಸ್ಥಳದಲ್ಲಿ ಅದೇ ಪ್ರಮಾಣದ ಕಾಮಗಾರಿ ನಡೆದಿದೆಯೇ ಎಂಬುದನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮಳೆನೀರು ಹರಿಯುವ ಸಂದರ್ಭದಲ್ಲಿ ಟೇಲ್ ಎಂಡ್‌ಗೆ ತೆರಳಿ ಫೋಟೋ ತೆಗೆದು ಕಾಲುವೆಯಲ್ಲಿ ನೀರು ಹರಿಯುತ್ತಿದೆ ಎಂಬ ದಾಖಲೆ ಸೃಷ್ಟಿಸುವ ಬದಲು, ನಿಜವಾದ ನೀರಾವರಿ ಅವಧಿಯಲ್ಲಿ ಡ್ಯಾಂನಿಂದ ಬಿಡುವ ನೀರು ಟೇಲ್ ಎಂಡ್‌ವರೆಗೆ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದನ್ನು ಸ್ಥಳದಲ್ಲೇ ಅಳತೆ ಮಾಡಿ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಚವನಭಾವಿ ಗ್ರಾಮದ ರೈತರ ಸಮ್ಮುಖದಲ್ಲಿ ಡಿಸ್ಟ್ರಿಬ್ಯೂಟರ್-40ನೇ ಕಾಲುವೆಯನ್ನು ಕಾಲುವೆ ಮುಖದಿಂದ ಟೇಲ್ ಎಂಡ್‌ವರೆಗೆ ಸಂಪೂರ್ಣವಾಗಿ ಪರಿಶೀಲಿಸಬೇಕು. ಕಾಲುವೆಯಲ್ಲಿನ ಹೂಳು, ಕಳೆ, ಅಡಚಣೆ, ಸೋರಿಕೆ, ಒಡೆತ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ಥಳ ಪರಿಶೀಲನಾ ವರದಿ ಹಾಗೂ ಪಂಚನಾಮೆ ಸಿದ್ಧಪಡಿಸಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
‘ಒಂದು ಲಕ್ಷ ಸಾಲ ಮಾಡಿ ಬೆಳೆ ಹಾಕಿದ್ದೇವೆ’
“ಹೊಲಕ್ಕೆ ಹೋದರೆ ಕಣ್ಣಿಗೆ ಕಾಣುವುದು ಒಣಗಿದ ಬೆಳೆ ಮಾತ್ರ. ಒಂದು ಲಕ್ಷ ರೂಪಾಯಿ ಸಾಲ ಮಾಡಿ ಬೆಳೆ ಹಾಕಿದ್ದೇವೆ. ದನ-ಕರುಗಳಿಗೆ ನೀರಿಲ್ಲ, ಕುಡಿಯಲು ನೀರಿಲ್ಲ. ಬೆಳೆ ಉಳಿಯದಿದ್ದರೆ ಸಾಲ ತೀರಿಸುವುದು ಹೇಗೆ? ನಮ್ಮ ಕಷ್ಟವನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ತಕ್ಷಣ ಕಾಲುವೆಗೆ ನೀರು ಹರಿಸಬೇಕು” ಎಂದು ಸಿದ್ದಪ್ಪ ಮಾದರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಗುರಿಕಾರ, ಸಿದ್ದಪ್ಪ ಮಾದರ, ಮಲ್ಲಪ್ಪ ಮಾಲಿನ, ಹುಲಪ್ಪ ಗುಂಡಕರಜಗಿ, ಯಮನಪ್ಪ ಬಿರಾದಾರ, ಸಂಗಪ್ಪ ಬಿರಾದಾರ, ಮೌನೇಶ ಬಿರಾದಾರ, ಸಿದ್ದಪ್ಪ ಮದರಿ, ದೇವಪ್ಪ ಜಂಗಡಭಾವಿ, ಸಿದ್ದಪ್ಪ ವಾಲಿಕಾರ, ಹಣಮಂತ ಗೋಗಿ, ಜಕ್ಕಪ್ಪ ನಾಲತವಾಡ ಸೇರಿದಂತೆ ಚವನಭಾವಿ ಗ್ರಾಮದ ರೈತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಪರಿಪೂರ್ಣ ಹಾಗೂ ಪರಿಪಕ್ವವಾದ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಉದ್ದೇಶ"ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶ: ಸ್ವಪ್ನಿಲ್ ಶಹಅಪಘಾತ: ಬೈಕ್‌ ಸವಾರ ಸಾವುವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿಗೆ ಆಗ್ರಹಿಸಿ ಇಂಡಿ ಶಾಸಕ ಯಶವಂತರಾಯಗೌಡರಿಗೆ ಹೋರಾಟ ಸಮಿತಿಯಿಂದ ಮನವಿಕಾಲುವೆಗೆ ನೀರು ಹರಿಸಿ, ಬೆಳೆ ಉಳಿಸಿ: ಅಧಿಕಾರಿಗಳ ವಿರುದ್ಧ ಚವನಭಾವಿ ರೈತರ ಆಕ್ರೋಶಗಣೇಶ ಹಬ್ಬದಲ್ಲಿ ಮಿತಿ ಮೀರಿದ ಧ್ವನಿವರ್ಧಕಗಳನ್ನು (ಡಿಜೆ ಸೌಂಡ್ ಸಿಸ್ಟಮ್) ಬಳಸಿದರೆ, 1 ಲಕ್ಷ ರೂಪಾಯಿ ದಂಡ; ಪಿಓಪಿ ಗಣೇಶ ವಿಗ್ರಹ ಬಳಕೆ ಸಂಪೂರ್ಣ ನಿಷೇಧ: ಜಿಲ್ಲಾಧಿಕಾರಿ ಸ್ನೇಹಲ್ ಆರ್.ಅಂಗಡಿ ಮಳಿಗೆಗಳಿಂದ ಪ್ರಯಾಣಿಕರಿಗೆ ಅನಾನುಕೂಲ: ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹಸಂಘಗಳ ಸ್ಥಾಪನೆಗೆ ಸದಸ್ಯತ್ವ ನೊಂದಣಿ ಆರಂಭಎಸ್‌ಜಿಎಮ್‌ಎಚ್‌ಪಿ ಶಾಲೆಯಲ್ಲಿ ವೈಭವದ ೮೦ನೇ ಸ್ವಾತಂತ್ರ್ಯೋತ್ಸವಶರಣರ ಧರ್ಮನಿಷ್ಠೆ ಚಿಂತನೆಗಳು ಬಧುಕಿಗೆ ಪೂರಕ-ಪರಶುರಾಮ