ಬೆಳಗಾವಿ: ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶವಿದ್ದು, ಉದ್ಯಮಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ (ಬಿಸಿಸಿಐ) ಅಧ್ಯಕ್ಷ ಸ್ವಪ್ನಿಲ್ ಶಹ ಹೇಳಿದರು.
ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘ (ಬಿಡಿಎಸ್ಎಸ್ಐಎ) ಬುಧವಾರ ಆಯೋಜಿಸಿದ್ದ ಆಮದು ಮತ್ತು ರಫ್ತು ಉದ್ಯಮ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಉದ್ಯಮಿಗಳಿಗೆ, ಉದ್ಯಮಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದ ಅವರು, ಚೆಂಬರ್ ಆಫ್ ಕಾಮರ್ಸ್ ಆಸಕ್ತ ಉದ್ಯಮಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ, ಬೆಳಗಾವಿಯಲ್ಲಿ
150 ಕ್ಕೂ ಹೆಚ್ಚು ರಫ್ತು ಉದ್ಯಮಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಆದರೆ ಅವರಲ್ಲಿ ಕೇವಲ 35 ಉದ್ಯಮಿಗಳು ಮಾತ್ರ ಕ್ರಿಯಾಶೀಲರಾಗಿದ್ದಾರೆ ಎಂದರು.
ಸರಕಾರದಿಂದ ರಫ್ತು ಉದ್ಯಮಕ್ಕೆ ಸಾಕಷ್ಟು ಸಹಕಾರವಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬೆಳಗಾವಿಯಲ್ಲಿ ಉದ್ಯಮಗಳಿಗೆ ಒಳ್ಳೆಯ ವಾತಾವರಣವಿದೆ. ಜಿಲ್ಲಾ ಕೈಗಾರಿಕಾ ಕೇಂದ್ರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ನಿತಿನ್ ಲಾಂಡಗೆ ಸ್ವಾಗತಿಸಿದರು. ರಿಟೇಲ್ ಟ್ರೇಡ್ ಆ್ಯಂಡ್ ಫಾರೆಕ್ಸ್ ಪ್ರಾದೇಶಿಕ ಉಪಾಧ್ಯಕ್ಷ ಅನುರಾಗ ಅಗ್ರಹಾರಿ ಸಹ ಅತಿಥಿಗಳಾಗಿ ಆಗಮಿಸಿದ್ದರು.
ಆಮದು ಮತ್ತು ರಫ್ತು ತರಬೇತಿ ಕನ್ಸಲ್ಟಂಟ್ ತಾಸಿನ್ ಎಂ.ಎಂ. ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ರಿಟೇಲ್ ಟ್ರೇಡ್ ಫಾರೆಕ್ಸ್ ಉಪ ಉಪಾಧ್ಯಕ್ಷ ಕೆ.ರಂಗನಾಥ, ಎಚ್ ಡಿಎಫ್ ಸಿ ಶಾಖಾ ವ್ಯವಸ್ಥಾಪಕ ಸಿದ್ರಾಮ ಕುರಬೆಟ್ ಉಪನ್ಯಾಸ ನೀಡಿದರು.
ಸಂದೀಪ್ ಬಾಗೇವಾಡಿ, ಬಸವರಾಜ ರಾಂಪುರೆ, ಮನೋಜ ಮತ್ತಿಕೊಪ್, ರಾಜೇಂದ್ರ ಮುತಗೇಕರ್, ಎಂ.ಕೆ.ಹೆಗಡೆ, ರೋಹಿತ್ ಕಪಾಡಿಯಾ, ವಿನೀತ ಹರಕುಣಿ, ವಿಜಯ ದರಗಶೆಟ್ಟಿ, ಅಶೋಕ ಕೋಳಿ, ಅಶೋಕ ಕಾಟವೆ, ಸದಾಶಿವ ವಿನೀತ್ ಮೊದಲಾದವರು ಇದ್ದರು.
ವೈಭವ ಯಾದವ ನಿರೂಪಿಸಿದರು. ಸಣ್ಣ ಕೈಗಾರಿಕೆಗಳ ಸಂಘದ ಗೌರವ ಕಾರ್ಯದರ್ಶಿ ಸತೀಶ್ ನೇರ್ಲೇಕರ್ ವಂದಿಸಿದರು.
ಬೆಳಗಾವಿ ವಾಣಿಜ್ಯೋದ್ಯಮ ಸಂಘ, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದವು.