ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣದ ಹಳೆ ಬಸ್ ನಿಲ್ದಾಣವು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣಗೊಂಡಿದ್ದರೂ, ಇದೀಗ ಬಸ್ ನಿಲ್ದಾಣದ ಜಾಗವೇ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿರುವ ಆರೋಪ ಕೇಳಿಬಂದಿದೆ. ಇದರಿಂದ ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ಆಗಮಿಸುವ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ಧರು ತೀವ್ರ ಅನಾನುಕೂಲ ಅನುಭವಿಸುವಂತಾಗಿದೆ.
ಕಿತ್ತೂರು ಪಟ್ಟಣದಲ್ಲಿ 1984ರಲ್ಲಿ ಸಾರ್ವಜನಿಕರ ದೇಣಿಗೆ ಹಾಗೂ ಸರ್ಕಾರದ ಸಹಯೋಗದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹಳೆ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಹಲವು ವರ್ಷಗಳ ಕಾಲ ಸಾರ್ವಜನಿಕರು ಹಾಗೂ ಪ್ರಯಾಣಿಕರು ಇದರ ಸೌಲಭ್ಯವನ್ನು ಬಳಸಿಕೊಂಡು ಬಂದಿದ್ದರು. ಆದರೆ ಕಾಲಕ್ರಮೇಣ ಬಸ್ ನಿಲ್ದಾಣದ ಜಾಗದಲ್ಲಿ ಅಂಗಡಿ ಮಳಿಗೆಗಳು ಹೆಚ್ಚಾಗಿದ್ದು, ಮೂಲ ಉದ್ದೇಶವೇ ಮರೆತುಹೋಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿ ಅವಧಿಯಿಂದಲೇ ಅಧಿಕಾರದ ದುರುಪಯೋಗದ ಮೂಲಕ ಬಸ್ ನಿಲ್ದಾಣದ ಜಾಗವನ್ನು ವ್ಯಾಪಾರಿಕ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ವಿವಿಧ ಪತ್ರಿಕೆಗಳಲ್ಲಿ ಹಲವು ಬಾರಿ ವರದಿಗಳು ಪ್ರಕಟವಾದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಬಸ್ ನಿಲ್ದಾಣದ ಸಮಸ್ಯೆ ಕುರಿತು ಕೆಎಸ್ಆರ್ಟಿಸಿ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಗಮನಹರಿಸಿ, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಹಳೆ ಬಸ್ ನಿಲ್ದಾಣದ ವ್ಯವಸ್ಥೆಯನ್ನು ಪುನಃ ಕಲ್ಪಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಘಟಕ ಹಾಗೂ ಕಿತ್ತೂರು ಪಟ್ಟಣದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ ಹಳೆ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ, ಬಸ್ ನಿಲ್ದಾಣದ ಮೂಲ ಉದ್ದೇಶವನ್ನು ಮರುಸ್ಥಾಪಿಸದಿದ್ದರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ಗ್ರಾಮೀಣ ಭಾಗದ ನಾಗರಿಕರನ್ನು ಒಳಗೊಂಡು ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ಹೋರಾಟದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸಂಘ ತಿಳಿಸಿದೆ.
“ಸಾರ್ವಜನಿಕರಿಗಾಗಿ ನಿರ್ಮಿಸಿದ ಬಸ್ ನಿಲ್ದಾಣ ಸಾರ್ವಜನಿಕರಿಗೇ ಸಿಗಬೇಕು. ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿರುವ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ, ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣ ಪಂಚಾಯಿತಿ, ಕೆಎಸ್ಆರ್ಟಿಸಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಪ್ರವೀಣ ಸರದಾರ, ಸತೀಶ ಲಂಗೋಟಿ, ಚನ್ನಬಸ್ಯಯ್ಯ ಹಿರೇಮಠ, ಚನ್ನಯ್ಯ ಹಾಲಮಠ, ಹೊಂಡಪ್ಪ ಶಿವಪೂಜಿ, ಮುದಕಪ್ಪ ಹತ್ತಿಕಟಗಿ, ಮಾರುತಿ ಕಲ್ಲವಡ್ಡರ, ರಮೇಶಸಂಪಗಾವಿ, ಸುರೇಶ ಕಡಕೋಳ, ಬಸವರಾಜ ಕಮ್ಮಾರ, ಬಸಯ್ಯ ಕೇರಿಮಠ, ಸೋಮು ತೇಗೂರ, ಶಿವಾನಂದ ತೇಗೂರ, ರಾಜು ಹೊಸಮನಿಸೇರಿದಂತೆ ಇತರರಿದ್ದರು.