ತಾಳಿಕೋಟೆ : ತಾಳಿಕೋಟೆ ತಾಲೂಕು ಒಳಗೊಂಡು ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ ರೈತ ಮೂರ್ಚಾ ಹಾಗೂ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸೋಮವಾರರಂದು ಕರೆ ನೀಡಿದ್ದ ತಾಳಿಕೋಟೆ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ೩ ದಿನಗಳ ಸತತ ಹೋರಾಟದ ನಂತರ ಸೋಮವಾರರಂದು ಸಂಪೂರ್ಣ ಬಂದ್ ಕರೆಯೊಂದಿಗೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಿಂದ ಬೃಹತ್ ಪ್ರತಿಭಟನೆಯ ಮೂಲಕ ಕತ್ರಿ ಬಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆಗುಂಟಾ ಹಾಯ್ದು ಬಸವೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.
ತಾಳಿಕೋಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಹುತೇಕ ಎಲ್ಲ ಅಂಗಡಿ-ಮುಂಗಟ್ಟುಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು. ಮದ್ಯ ಮಾರುಕಟ್ಟೆ, ಸರಾಫ್ ಬಜಾರ್, ಎಪಿಎಂಸಿ, ಕಿರಾಣಿ, ಅಡತ್ ಮರ್ಚಂಟ್, ತರಕಾರಿ, ಹಣ್ಣು ಸೇರಿದಂತೆ ವಿವಿಧ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಪರಿಣಾಮ ಪಟ್ಟಣದ ಪ್ರಮುಖ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬಂದ್‌ಗೆ ವ್ಯಾಪಾರಸ್ಥರು, ರೈತರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಸ್ ಸಂಚಾರ ಸ್ಥಗಿತ, ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ:
ಬಂದ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರವೂ ಸ್ಥಗಿತಗೊಂಡಿದ್ದರಿಂದ ತಾಳಿಕೋಟೆ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಪ್ರತಿದಿನ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಹಾಗೂ ಪ್ರಯಾಣಿಕರ ಓಡಾಟ ಇಲ್ಲದೆ ಖಾಲಿ ಖಾಲಿಯಾಗಿ ಕಂಡುಬಂತು.
ಗ್ರಾಮೀಣ ಭಾಗದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು ಆದರೆ ವಿಜಯಪುರ ಮಾರ್ಗ ಮತ್ತು ಮುದ್ದೇಬಿಹಾಳ, ಬಾಗಲಕೋಟೆ ಮಾರ್ಗದೆಡೆಗೆ ತೆರಳಲು ಬಸ್ಸುಗಳು ಮಿಣಜಗಿ ಸರ್ಕಲ್‌ದಿಂದ ಪ್ರಯಾಣಿಕರನ್ನು ಕರೆದುಕೊಂಡು ಹೋಗುವದು ಬರುವದು ಮಾಡುತ್ತಿದ್ದವು ಆದರೆ ಸುಮಾರು ೩ ಕೀಲೋ ಮೀಟರ್ ಅಂತರದವರೆಗೆ ಅಟೋ ಇನ್ನಿತರ ಮೂಲಕ ಸಂಚರಿಸಿ ತೆರಳಿದರೆ ಸುರಪೂರ, ಯಾದಗಿರಿ ಕಡೆಗೆ ತೆರಳಲು ಮೈಲೇಶ್ವರ ಸರ್ಕಲ್, ದೇವರ ಹಿಪ್ಪರಗಿ ಕಡೆಗೆ ತೆರಳಲು ಬಸ್ ಘಟಕದಿಂದಾಚೆಗೆ ಬಸ್ಸುಗಳು ಸಂಚರಿಸಿದ್ದು ಕಂಡು ಬಂದವು.
ಕೆಲವು ಗ್ರಾಮೀಣ ಪ್ರದೇಶಗಳಿಗೆ ಹಾಗೂ ದೂರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಬಸ್‌ಗಳಿಲ್ಲದೆ ಪರದಾಡುವಂತಾಯಿತು. ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸ್ವಯಂಪ್ರೇರಿತವಾಗಿ ಶಾಲೆಗಳಿಗೆ ರಜೆ ಘೋಷಿಸಿದ್ದವು.
ಬೃಹತ್ ಪ್ರತಿಭಟನಾ ಮೆರವಣಿಗೆ:
ಪಟ್ಟಣದ ಶ್ರೀ ಖಾಸ್ಗತೇಶ್ವೆರ ಮಠದಿಂದ ಪ್ರಾರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಎತ್ತಿನ ಬಂಡೆಯ ಮೇಲೆ ಹತ್ತಿ ಚಾಲನೆ ನೀಡಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಬಸನಗೌಡ ಯಡಿಯಾಪೂರ, ಜೆಡಿಎಸ್ ತಾಲೂಕಾ ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಪ್ರಭುಗೌಡ ಅಸ್ಕಿ, ಬಸನಗೌಡ ಮಾಡಗಿ, ಸಂಗನಗೌಡ ಹೆಗರಡ್ಡಿ, ಸಾಯಬಣ್ಣ ಆಲ್ಯಾಳ, ಡಾ.ಭಲವಂತ್ರಾಯ ನಡಹಳ್ಳಿ, ರಾಜುಗೌಡ ಗುಂಡಕನಾಳ, ಎಂ.ಎಂ.ಪಾಟೀಲ, ರಾಜುಗೌಡ ಕೊಳೂರ, ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರದ ಮೇಲೆ ಒತ್ತಡ ಹೇರಲು ಒಗ್ಗಟ್ಟು:
ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಿದ ಪಟ್ಟಣದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್‌ನಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ನೀಡಿದರು. ತಾಳಿಕೋಟೆ ತಾಲೂಕು ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಬರಪೀಡಿತ ತಾಲೂಕೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಹಾಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಯಾವದೇ ತರಹದ ಅಹಿತಕರ ಘಟನೆ ಜರುಗದಂತೆ ಡಿಎಸ್‌ಪಿ ನಂದಾರೆಡ್ಡಿ, ಸಿಪಿಐ ಮೊಹ್ಮದ್ ಫಸಿವುದ್ದೀನ್, ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್, ಅಪರಾಧ ವಿಭಾಗದ ಪಿಎಸ್‌ಐ ಎಸ್.ಎಂ.ಪಡಶೆಟ್ಟಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಯೋಗ್ಯ ಬಂದೋಬಸ್ತ ಕೈಗೊಂಡಿದ್ದರು.
ಗಣಪತಿಯ ಮಹಾ ಪ್ರಸಾದ
ಪೂರ್ವ ನಿಗಧಿಯಂತೆ ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾಗಣಪತಿ ಮಹಾ ಮಂಡಳಿಯವರು ಮಹಾ ಪ್ರಸಾದ ಆಯೋಜನೆ ಮಾಡಿದ್ದರಿಂದ ಆಗಮಿಸಿದ ಸಾವಿರಾರು ಜನರಿಗೆ ಮಹಾ ಗಣಪತಿ ಮಹಾ ಪ್ರಸಾದ ಸ್ವಿಕರಿಸಿದ್ದರು. ಬಂದ್ ವೇಳೆ ಕುಡಿಯಲು ನೀರು ಸಿಗದಂತಹ ಪರಸ್ಥಿತಿ ಎದುರಾಗಿತ್ತು ಆದರೆ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ವತಿಯಿಂದ ಆಗಮಿಸಿದ ರೈತರಿಗೆ ಎಲ್ಲ ಸದ್ಭಕ್ತರಿಗೆ ಪ್ರಸಾದದ ಜೊತೆಗೆ ಕುಡಿಯುವ ನೀರಿ ಸಿಕ್ಕಿದ್ದರಿಂದ ಸಂತೃಪ್ತಗೊಂಡರು.