LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಬರ ಘೋಷಣೆಗೆ ಆಗ್ರಹಿಸಿ ಬುಧವಾರದಿಂದ ಸರದಿ ಉಪವಾಸ ಸತ್ಯಾಗ್ರಹ



ತಾಳಿಕೋಟೆ :   ತಾಳಿಕೋಟಿ, ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಳಿಕೋಟಿ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸೋಮವಾರ ೧೮ ದಿನ ಪೂರೈಸಿ, ಮಂಗಳವಾರ ೧೯ನೇ ದಿನಕ್ಕೆ ಕಾಲಿಟ್ಟಿದೆ.
         ಧರಣಿ ಉದ್ದೇಶಿಸಿ ಮಾತನಾಡಿದ ರೈತ ಸಂಘದ ತಾಳಿಕೋಟಿ ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ೧೯ ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ತಾಳಿಕೋಟಿ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಮೀನಮೇಷ ಎಣಿಸುತ್ತಿದೆ. ರೈತರ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
        ವಿಜಯಪುರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದನ್ನು ಸರ್ಕಾರಕ್ಕೆ ಮನವರಿಕೆಯಾಗಿದ್ದರೂ ತಾಳಿಕೋಟಿ, ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಕಡೆಗಣಿಸಿರುವುದು ಮಲತಾಯಿ ಧೋರಣೆಯಾಗಿದೆ ಎಂದು ಅವರು ದೂರಿದರು. ಸರ್ಕಾರ ತನ್ನ ನಿರ್ಧಾರವನ್ನು ಮುಂದುವರಿಸಿದರೆ ಹೋರಾಟದ ಸ್ವರೂಪ ಬದಲಾಯಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
       ಕತ್ತೆ ಚಳವಳಿ ನಡೆಸಲು ಮುಂದಾದ ಸಂದರ್ಭದಲ್ಲಿ ಕತ್ತೆ ಸಮೇತ ರೈತರನ್ನು ಬಂಧಿಸಲಾಗಿತ್ತು. ಇನ್ನು ಮುಂದೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಬುಧವಾರದಿಂದ ಮೊದಲ ಹಂತವಾಗಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಪ್ರತಿದಿನ ಇಬ್ಬರು ರೈತರು ಬೆಳಗ್ಗೆ ೧೧ರಿಂದ ಮರುದಿನ ಬೆಳಗ್ಗೆ ೧೧ರವರೆಗೆ ಆಹಾರ ಮತ್ತು ನೀರು ಸೇವಿಸದೆ ಉಪವಾಸ ನಡೆಸಲಿದ್ದಾರೆ. ಬಳಿಕ ಮತ್ತಿಬ್ಬರು ರೈತರು ಸರದಿ ಉಪವಾಸ ಮುಂದುವರಿಸಲಿದ್ದಾರೆ. ನಾಲ್ಕೈದು ದಿನಗಳ ಕಾಲ ಈ ಹೋರಾಟ ನಡೆಸಲಾಗುವುದು. ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಲಿಂಗದಳ್ಳಿ ತಿಳಿಸಿದರು.
        ಆಮರಣ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಉಪವಾಸ ನಿರತ ರೈತರಿಗೆ ಯಾವುದೇ ಜೀವಹಾನಿಯಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
          ಈ ಸಂದರ್ಭದಲ್ಲಿ ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಶ್ರೀನಿವಾಸ ಗೊಟಗುಣಕಿ, ಸಂಗನಗೌಡ ಕೋಳೂರು, ಮುತ್ತು ಪಾತರಗೋಳ, ಪ್ರಭಾಕರ್ ಗುಳಗುಂಟಿ, ಮಲ್ಲನಗೌಡ ಬಿರಾದಾರ, ಸಂಗನಗೌಡ ಟಕ್ಕಳಕಿ, ಶಾಂತಗೌಡ ವಠಾರ, ಗೌಡಪ್ಪ ಕೊಡಗನೂರ, ರಾಮನಗೌಡ ಯಾಳವಾರ, ಅರುಣಕುಮಾರ ತುಂಬಗಿ, ಶಿವರಾಜ ಪಾಟೀಲ, ಗೌಡಪ್ಪ ಲಿಂಗದಳ್ಳಿ, ರಾಮನಗೌಡ ಕೊಳೂರ ಸೇರಿದಂತೆ ರೈತರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST